ಬೆಂಗಳೂರು, ಮೇ.19 (DaijiworldNews/HR): ಬಳ್ಳಾರಿಯಲ್ಲಿ ಜೆಎಸ್ಡಬ್ಲ್ಯೂ ಸ್ಟೀಲ್ ಸಂಸ್ಥೆ ಸ್ಥಾಪಿಸಿದ 1000 ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆಗಳ ಕೊರೊನಾ ಕೇರ್ ಸೆಂಟರ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಅವರು, "ರಾಜ್ಯದ್ಯಂತ ಕೊರೊನಾದ ಎರಡನೇ ಅಲೆ ತೀವ್ರಗತಿಯಲ್ಲಿದ್ದು, ಈ ವೇಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರದ ಈ ಪ್ರಯತ್ನದಲ್ಲಿ ಖಾಸಗಿ ಸಂಸ್ಥೆಗಳೂ ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ" ಎಂದರು.
ಇನ್ನು ಆಸ್ಪತ್ರೆಗೆ ನಿರಂತರವಾಗಿ ಆಕ್ಸಿಜನ್ ಪೂರೈಸಲು ಜೆಎಸ್ಡಬ್ಲ್ಯೂ ಉಕ್ಕಿನ ಸ್ಥಾವರದಿಂದ 4.8 ಕಿ.ಮೀ. ಪೈಪ್ಲೈನ್ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಯ ಜವಾಬ್ದಾರಿಯನ್ನು ಬಳ್ಳಾರಿ ಜಿಲ್ಲಾಡಳಿತ ನಿರ್ವಹಿಸಲಿದೆ. ವೈದ್ಯರು, ನರ್ಸ್, ಅರೆವೈದ್ಯಕೀಯ ಸಿಬ್ಬಂದಿ, ಮೇಲ್ವಿಚಾರಕರು ಮತ್ತು ವೈದ್ಯಕೀಯೇತರ ಸಿಬ್ಬಂದಿ ಇದ್ದು, ವಿವಿಧ ಪಾಳಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದಾರೆ" ಎಂದಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚುತ್ತಿರುವ ಆಕ್ಸಿಜನ್ ಬೇಡಿಕೆ ಸರಿದೂಗಿಸುವುದಕ್ಕಾಗಿ ಮೂರು ಅಂಶಗಳ ಕಾರ್ಯತಂತ್ರ ರೂಪಿಸಲಾಗಿದ್ದು, ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಕ್ಸಿಜನ್ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಇನ್ನು ಜೆಎಸ್ಡಬ್ಲ್ಯೂ ಸ್ಟೀಲ್ ಕಂಪನಿಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಮಾತನಾಡಿ, " 1000 ಆಕ್ಸಿಜನ್ ಸೌಲಭ್ಯವುಳ್ಳ ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಕೊರೊನಾ ಕೇರ್ ಸೆಂಟರ್ ಅನ್ನು ಬಳ್ಲಾರಿ ಮತ್ತು ನೆರೆಯ ಜಿಲ್ಲೆಗಳ ಜನರಿಗೆ ನೀಡಲು ಸಂತೋಷವಾಗಿದೆ" ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಮತ್ತು ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಮುಖ್ಯಮಂತ್ರಿಯವರೊಂದಿಗೆ ವರ್ಚುವಲ್ ಕಾರ್ಯದಲ್ಲಿ ಭಾಗವಹಿಸಿದರು.