ನವದೆಹಲಿ, ಮೇ 19 (DaijiworldNews/MS): ದೇಶದಲ್ಲಿ ಕೊರೊನಾ ಲಸಿಕೆ ಕೊರತೆ ಕಾಡ್ತಿದ್ದು, ಹೆಚ್ಚಿನ ದೇಶೀಯ ಕಂಪನಿಗಳಿಗೆ ಲಸಿಕೆಗಳು ಮತ್ತು ಜೀವ ಉಳಿಸುವ ಔಷಧಿಗಳ ತಯಾರಿಕೆಗೆ ಪರವಾನಗಿ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದರು.
'ಬೇಡಿಕೆ ಹೆಚ್ಚು ಮತ್ತು ಪೂರೈಕೆ ಕಡಿಮೆ ಇದ್ದರೆ, ಅದು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ, ಒಂದರ ಬದಲು 10 ಲಸಿಕೆ ಕಂಪನಿಗಳಿಗೆ ಪರವಾನಗಿ ನೀಡಬೇಕು. ಅವರಿಂದ ರಾಯಧನವನ್ನೂ ತೆಗೆದುಕೊಳ್ಳಬಹುದು. ಅದನ್ನು ದಾನಧರ್ಮವಾಗಿ ಮಾಡುವ ಅಗತ್ಯವಿಲ್ಲ. ಇನ್ನೂ 10 ಸ್ಥಳಗಳಲ್ಲಿ ಲಸಿಕೆ ಉತ್ಪಾದನಾ ಘಟಕಗಳನ್ನ ತೆರೆಯಬೇಕು. ಪ್ರತಿಯೊಂದು ರಾಜ್ಯದಲ್ಲೂ ಲ್ಯಾಬ್ಗಳಿವೆ, ಅವು ಸಾಮರ್ಥ್ಯ ಮತ್ತು ಮೂಲಸೌಕರ್ಯವನ್ನು ಸಹ ಹೊಂದಿವೆ. ಅವರಿಗೆ ಸೂತ್ರವನ್ನು ನೀಡಿ ಮತ್ತು ಲ್ಯಾಬ್ಗಳು ಮತ್ತು ಕಂಪನಿಗಳ ನಡುವೆ ಸಮನ್ವಯ ಸಾಧಿಸಿ ಮತ್ತು ಉತ್ಪಾದನೆಯನ್ನು ಹೆಚ್ಚಿಸಿ. ಇದನ್ನು 15-20 ದಿನಗಳಲ್ಲಿ ಮಾಡಬಹುದು. ಮೊದಲು ಅವರು ದೇಶದಲ್ಲಿ ಸರಬರಾಜು ಮಾಡಲಿ ಮತ್ತು ಹೆಚ್ಚುವರಿ ಇದ್ದರೆ ರಫ್ತು ಮಾಡಲಿ' ಎಂದು ವಿಶ್ವವಿದ್ಯಾಲಯಗಳ ಉಪಕುಲಪತಿಗಳನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಗಡ್ಕರಿ ಹೇಳಿದರು.
ಸಚಿವರ ಸಲಹೆಯ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದು, . ಕೋವಿಡ್ -19 ಬಿಕ್ಕಟ್ಟನ್ನು ನಿರ್ವಹಿಸುವ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರವನ್ನು ಉಲ್ಲೇಖಿಸಿ "ಇದೇ ಸಲಹೆಯನ್ನು ಏಪ್ರಿಲ್ 18 ರಂದು ಡಾ. ಮನಮೋಹನ್ ಸಿಂಗ್ ಅವರು ಸೂಚಿಸಿದ್ದರು. ಆದರೆ ಅದನ್ನು ಅವರ ಬಾಸ್ ಆಲಿಸುತ್ತಿದ್ದಾರೆಯೇ?" ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಇನ್ನು ಬುಧವಾರ ಬೆಳಿಗ್ಗೆ ಗಡ್ಕರಿ ಸ್ಪಷ್ಟೀಕರಣವನ್ನು ನೀಡಿ, ಸರ್ಕಾರ ಈಗಾಗಲೇ ಈ ಪ್ರಯತ್ನಗಳನ್ನು ಪ್ರಾರಂಭಿಸಿದೆ. "ನಿನ್ನೆ ಸ್ವದೇಶಿ ಜಾಗರನ್ ಮಂಚ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸುವಾಗ, ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ನಾನು ಸಲಹೆ ನೀಡಿದ್ದೆ. ಆದರೆ ಸರ್ಕಾರ ಈಗಾಗಲೇ 12 ವಿವಿಧ ಘಟಕ / ಕಂಪನಿಗಳ ಮೂಲಕ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಗಳನ್ನು ಮಾಡಿದ್ದು ಈ ಮಾಹಿತಿಗಳ ಬಗ್ಗೆ ನನಗೆ ಅರಿವಿರಲಿಲ್ಲ ಎಂದು ಹೇಳಿದ್ದಾರೆ.