ವಿಜಯಪುರ, ಮೇ.19 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸುಮ್ಮನೆ ಮನೆಯಲ್ಲಿ ಕೂರುವ ಬದಲು ಕ್ರಿಯಾಶೀಲರಾಗಿ ಕೆಲಸ ಮಾಡಿ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಿಂದಾಲ್ ಕಂಪೆನಿಗೆ ಜಮೀನು ನೀಡಬೇಕು ಎಂದು ಸಿಎಂ ಸ್ಥಾನದಲ್ಲಿ ಸುಮ್ಮನೆ ಕೂರಬೇಡಿ. ನಿಮಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದಾದರೆ, ದಯವಿಟ್ಟು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯಿರಿ. ಸರ್ಕಾರ ವಿಜಯಪುರ ಆಸ್ಪತ್ರೆಗೆ ಸರಿಯಾಗಿ ಕೊರೊನಾ ಲಸಿಕೆ ಪೂರೈಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ವರ್ಗಗಳಿಗೆ ಸರ್ಕಾರ ಸಮಾನವಾದ ಪರಿಹಾರವನ್ನು ವಿತರಿಸುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.
ವಿಶೇಷ ಪ್ಯಾಕೇಜ್ ಘೋಷಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಪರಿಹಾರ ಘೋಷಣೆಯನ್ನು ಲಾಕ್ಡೌನ್ಗಿಂತ ಮೊದಲೇ ಘೋಷಣೆ ಮಾಡಬೇಕಿತ್ತು. ಒಂದುವೇಳೆ ಕೊರೊನಾ ಹೆಚ್ಚಾದಲ್ಲಿ ಸಿಎಂ ಅವರ ಖರ್ಚಿನಲ್ಲಿ ಉಳಿಯಬಹುದು ಎನ್ನುವುದು ಸಿಎಂ ಅವರ ಯೋಚನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಸಿಕೆ ಕೊರತೆ ಬಗ್ಗೆ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಮೋದಿ ಲಸಿಕೆ ಎಂದು ಅಪಪ್ರಚಾರ ಮಾಡಿ, ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಈ ಕಾರಣದಿಂದ ಲಕ್ಷಾಂತರ ಲಸಿಕೆ ವ್ಯರ್ಥವಾಗಿದೆ. ಇದಕ್ಕೆ ಕಾಂಗ್ರೆಸ್ಸಿಗರೇ ಕಾರಣ" ಎಂದು ಕೆಂಡಕಾರಿದರು.