ಬಾಗಲಕೋಟೆ, ಮೇ.19 (DaijiworldNews/PY): "ಒಂದುವೇಳೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರದೇ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಿದ್ದರೆ ಕೊರೊನಾ ಸೋಂಕಿನಿಂದ ದೇಶದ ಅರ್ಧಕ್ಕೂ ಮಂದಿ ಸಾವನ್ನಪ್ಪುತ್ತಿದ್ದರು" ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, "ವಿಪಕ್ಷ ಎಂದರೆ ಆಡಳಿತ ಮಾಡುವವರ ಬಗ್ಗೆ ಟೀಕಿಸುವುದಲ್ಲ. ಬದಲಾಗಿ ಅವರಿಗೆ ಸಲಹೆ, ಮಾರ್ಗದರ್ಶನ ನೀಡಲಿ. ಮಹಾರಾಷ್ಟ್ರದಲ್ಲಿ ನಿಮ್ಮದೇ ಪಕ್ಷದ ಬೆಂಬಲದ ಸರ್ಕಾರ ಅಧಿಕಾರದಲ್ಲಿದೆ. ಕೊರೊನಾದಿಂದ ಅಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನೆನಪಿರಲಿ" ಎಂದಿದ್ದಾರೆ.
"ಕೊರೊನಾ ಲಸಿಕೆ ಅಭಿಯಾನ ಆರಂಭವಾಗುವ ಸಂದರ್ಭ ಕಾಂಗ್ರೆಸ್ ಪಕ್ಷ ಅಪ್ರಚಾರ ಮಾಡಿದ ಕಾರಣ ಜನರು ಇದರಿಂದ ದೂರ ಉಳಿದಿದ್ದರು. ಈಗ ಲಸಿಕೆಗಾಗಿ ಮುಗಿಬಿದ್ದಿರುವ ಕಾರಣ, ಲಸಿಕೆ ಕೊರತೆಯಾಗಿದೆ. ಲಸಿಕೆಯ ಕೊರತೆಗೆ ಕೈ ನಾಯಕರೇ ಕಾರಣ. ಅವರ ವಿರುದ್ದ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಕೊರೊನಾಕ್ಕೆ ಹೆದರಿ ಮಾಜಿ ಸಚಿವೆ ಉಮಾಶ್ರೀ ಅವರು ಬೆಂಗಳೂರಿನಲ್ಲಿ ಕುಳಿತು ನನ್ನ ವಿರುದ್ದ ಆಡಿಯೋ, ವಿಡಿಯೋ ಮಾಡಿಸುವುದು ಸರಿಯಲ್ಲ. ಬದಲಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಲಿ" ಎಂದು ಲೇವಡಿ ಮಾಡಿದರು.
ಈ ವೇಳೆ ಮಾತನಾಡಿದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, "ಲಸಿಕೆ ವಿಚಾರವಾಗಿ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಪ್ರತೀದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀಕೆ ಮಾಡುವುದೇ ಒಂದು ಕೆಲಸವಾಗಿದೆ. ಅವರಿಗೆ ಪ್ರಬುದ್ದತೆ ಇದ್ದಂತೆ ಕಾಣುವುದಿಲ್ಲ" ಎಂದಿದ್ದಾರೆ.
"ರಾಹುಲ್ ಗಾಂಧಿ ಅವರ ತಾಯಿಯ ತವರು ಮನೆ ಇಟಲಿಯಲ್ಲಿ ಆರು ಕೋಟಿ ಜನ ಇಲ್ಲ. ಕೊರೊನಾದ ಮೊದಲೇ ಅಲೆಯ ವೇಳೆ ಜನರು ಫುಟ್ಪಾತ್ ಮೇಲೆ ಸತ್ತು ಬಿದ್ದಿದ್ದರು. 130 ಕೋಟಿ ಜನರು ಇರುವ ಈ ದೇಶದಲ್ಲಿ ಮೋದಿ ವ್ಯಾಕ್ಸಿನ್ ಹಾಕಿಸಲು ಮುಂದಾದರೆ ಅದು ಮೋದಿ ವ್ಯಾಕ್ಸಿನ್. ಆ ವ್ಯಾಕ್ಸಿನ್ ಅನ್ನು ಯಾರೂ ಹಾಕಿಸಿಕೊಳ್ಳಬೇಡಿ ಎಂದು ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದ್ದರು. ಕಾಂಗ್ರೆಸ್ ಇಂತಹ ಸ್ಥಿತಿಗೆ ಬಂದರೂ ಕೂಡಾ ಕೊರೊನಾ ವಿಚಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಟೀಕೆ ಮಾಡುವುದನ್ನು ಮಾತ್ರ ಬಿಡುತ್ತಿಲ್ಲ" ಎಂದು ಕಿಡಿಕಾರಿದ್ದಾರೆ.