ಬೆಂಗಳೂರು, ಮೇ.19 (DaijiworldNews/HR): ಕೊರೊನಾ ಹಿನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್ ಬೋಗಸ್ ಆಗಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ ಎಂದಿರುವ ಎಚ್.ಡಿ. ಕುಮಾರಸ್ವಾಮಿ ಜನರ ದುಡ್ಡನ್ನು ಜನರಿಗೇ ಕೊಡಲು ನಿಮಗೇನು ಕಷ್ಟ? ಸರ್ಕಾರವೇನು ಬೆವರು ಸುರಿಸಿ ದುಡಿದ ಹಣವನ್ನು ಕೊಡ್ತಿತ್ತಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಇರೋದು 20 ಸಾವಿರ ಮಂದಿ ಮಾತ್ರ ಹೂವು ಬೆಳೆಗಾರರಿದ್ದಾರೆ ಎಂದು ಹೇಗೆ ಹೇಳುತ್ತೀರಿ? ಹೆಕ್ಟೇರ್ಗೆ 10 ಸಾವಿರ ಸಹಾಯಧನ ಅಂದ್ರೆ ಎಕರೆಗೆ ಸಿಗೋದು ಮೂರೂವರೆ ಸಾವಿರ ರೂಪಾಯಿ. ಒಂದು ಎಕರೆಯಲ್ಲಿ ಬೆಳೆ ಬಿತ್ತನೆ ಮಾಡೋಕೆ ಎಷ್ಟು ಖರ್ಚಾಗುತ್ತೆ ಎನ್ನೋದರ ಬಗ್ಗೆಯಾದರೂ ಯೋಚಿಸಬೇಕಲ್ಲವಾ? ಇವರಿಗೆ 20 ಸಾವಿರ ರೈತರ ಪಟ್ಟಿ ಕೊಟ್ಟವರು ಯಾರು? ಈ ಪ್ಯಾಕೇಜ್ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದ್ದು, ಇದು ಕಣ್ಣೊರೆಸುವ ತಂತ್ರ ಅಷ್ಟೆ" ಎಂದಿದ್ದಾರೆ.
"ಕಳೆದ ಬಾರಿ ಸರ್ಕಾರ ಸುಮಾರು 1200 ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಹೆಕ್ಟೇರ್ ಗೆ 25 ಸಾವಿರ ರೂಪಾಯಿ ನೀಡಿತ್ತು. ಈ ಬಾರಿ ಈ ಹಣವನ್ನೂ ತಗ್ಗಿಸಿ 10 ಸಾವಿರ ರೂಪಾಯಿ ಮಾಡಲಾಗಿದೆ" ಎಂದರು.
ಇನ್ನು ಈ ಪ್ಯಾಕೆಜ್ ಅವೈಜ್ಞಾನಿಕ ಪರಿಹಾರವಾಗಿದ್ದು, ಕಾರ್ಮಿಕರಿಗೆ ಹಣ ಕೊಡುವುದಿಲ್ಲ. ಕಾರ್ಮಿಕರ ಎಫ್ಡಿ ಹಣದಿಂದ ಕೊಡ್ತಿತ್ತಾರೆ ಅಷ್ಟೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ಯಾಕೇಜ್ ಘೋಷಿಸಬೇಕಿತ್ತು" ಎಂದು ಹೇಳಿದ್ದಾರೆ.