ಬೆಂಗಳೂರು, ಮೇ.19 (DaijiworldNews/PY): ಮಕ್ಕಳ ಮೇಲೆ ಕೊರೊನಾದ ಮೂರನೇ ಅಲೆಯು ಗಂಭೀರ ಪರಿಣಾಮ ಬೀರಲಿರುವ ಕಾರಣ ಸದ್ಯ ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಹೆಚ್ಚಿಸಲು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
"ಆಕ್ಸಿಜನ್, ಔಷಧಿಗಳು, ತುರ್ತು ಔಷಧಗಳು, ಎಚ್ಎಫ್ಎನ್ಸಿ, ಸಿಪಿಎಪಿ ಯಂತ್ರಗಳು, ವೆಂಟಿಲೇಟರ್ಗಳನ್ನು ಹೆಚ್ಚಿಸಬೇಕು. ಸೋಂಕು ತಗುಲಿದರೂ ಕೂಡಾ ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆ ಉತ್ತಮವಾಗಿ ಕಂಡುಬರುತ್ತಿದೆ. ಕೆಲವು ಪ್ರಕರಣಗಳಿಗೆ ಮಾತ್ರವೇ ಐಸಿಯುನ ಅಗತ್ಯವಿರುತ್ತದೆ. ಬಹುತೇಕ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ವಾರ್ಡ್ ಹಾಗೂ ಹಾಸಿಗೆಗಳಿವೆ. ಈ ಪೈಲಿ ಕೆಲವು ಬೆಡ್ಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡಲಾಗುವುದು" ಎಂದು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ನವೀನ್ ಬೆನಕಪ್ಪ ತಿಳಿಸಿದ್ದಾರೆ.
"ಕೊರೊನಾ ಸೋಂಕು ಹೆಚ್ಚು ಉಲ್ಬಣವಾದರೆ, ಪಿಜಿಯಲ್ಲಿರುವ ನಿವಾಸಿಗಳು, ಅಧ್ಯಾಪಕರಿಗೆ, ಹಿರಿಯ ಶಿಶುವೈದ್ಯರಿಗೆ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವವರಿಗೆ ತರಬೇತಿ ನೀಡಬೇಕು. ಸರ್ಕಾರಿ ಆಸ್ಪತ್ರೆಗೆ ಮಕ್ಕಳ ಪ್ರಕರಣಗಳನ್ನು ನಿರ್ವಹಿಸಲು ಹೆಚ್ಚಿನ ವೈದ್ಯರ ಹಾಗೂ ತಜ್ಞರ ಅಗತ್ಯವಿದೆ. ವಯಸ್ಕರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಕೂಡಾ ತರಬೇತಿ ನೀಡುವ ಅವಶ್ಯಕತೆ ಇದೆ" ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪೀಡಿಯಾಟ್ರಿಕ್ಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಲ್ಲೇಶ್ ಕೆ ಮಾಹಿತಿ ನೀಡಿದ್ದಾರೆ.
"ಗುತ್ತಿಗೆಗೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ವಯಸ್ಕರಿಗೆ ಹೆಚ್ಚು ಲಸಿಕೆ ನೀಡಿದರೆ, ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಆದರೆ, ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತದೆ" ಎಂದಿದ್ದಾರೆ.
"ಸಾಫ್ಟ್ವೇರ್ಗಳನ್ನು ರಿಸೆಟ್ ಮಾಡಿದಲ್ಲಿ ಅಸ್ತಿತ್ವದಲ್ಲಿರುವ ಉನ್ನತ ಮಟ್ಟದ ವೆಂಟಿಲೇಟರ್ಗಳನ್ನು, ಹೆಚ್ಎಫ್ಎನ್ಸಿಗಳನ್ನು ಮಕ್ಕಳಿಗೆ ಉಪಯೋಗಿಸಬಹುದು" ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, "ಸರ್ಕಾರದಿಂದ ಮಕ್ಕಳ ಕಾರ್ಯಪಡೆ ಸ್ಥಾಪಿಸಲಾಗುವುದು" ಎಂದು ಮೂಲಗಳು ತಿಳಿಸಿವೆ.
"ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ಮೂರಲೇ ಅಲೆ ಎದುರಿಸುವ ಬಗ್ಗೆ ಮಾರ್ಗದರ್ಶನ ಹಾಗೂ ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದ್ದಾರೆ" ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.