ಬೆಂಗಳೂರು, ಮೇ.19 (DaijiworldNews/HR): ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿರುವ ಪ್ಯಾಕೇಜ್ನಿಂದ ರಾಜ್ಯದ ಜನತೆಗೆ ಯಾವುದೇ ಲಾಭ ಇಲ್ಲ, ವಿಪಕ್ಷಗಳ ಬಾಯಿ ಮುಚ್ಚಿಸೋದಕ್ಕೆ ಮಾತ್ರ ಏನೋ ಒಂದು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ರೈತರು ಬೆಳೆದ ಬೆಳಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕಿತ್ತು. ರೈತರ ಕೃಷಿ ಸಾಲವನ್ನ ಮನ್ನಾ ಮಾಡಬಹುದಿತ್ತು. ಆದರೆ ಇವರು ಬಡ ಜನಕ್ಕಾಗಿ ಏನನ್ನೂ ಮಾಡಿಲ್ಲ. ಕಳೆದ ವರ್ಷ ಕೂಡ 25 ಸಾವಿರ ರೂಪಾಯಿ ಬಡವರಿಗೆ ಕೊಡುತ್ತೇನೆ ಎಂದಿದ್ದರು ಆದರೆ ಇಲ್ಲಿಯವರೆಗೆ ಯಾವ ಫಲಾನುಭವಿಗೂ ಹಣ ಸಿಕ್ಕಿಲ್ಲ" ಎಂದರು.
ಇನ್ನು ಈ ವರ್ಷ ಕೂಡ 2-3 ಸಾವಿರ ರೂಪಾಯಿ ಘೋಷಣೆ ಮಾಡಿದ್ದಾರೆ, ಅದು ಕೂಡ ಹೋದ ವರ್ಷದಂತೆಯೇ ಜನರ ಕೈ ಸೇರೋದಿಲ್ಲ.ಕಟ್ಟಡ ಕಾರ್ಮಿಕರಿಗೂ ರಾಜ್ಯ ಸರ್ಕಾರ ನ್ಯಾಯ ಒದಗಿಸಿಲ್ಲ. ರಾಜ್ಯ ಸರ್ಕಾರಕ್ಕೆ ಬಡವರ ಮೇಲೆ ಕನಿಷ್ಟ ಕಾಳಜಿ ಇಲ್ಲ. ಇವೆಲ್ಲವೂ ರಾಜ್ಯ ಸರ್ಕಾರದ ವೈಫಲ್ಯವನ್ನ ಎತ್ತಿ ತೋರಿಸುತ್ತೆ" ಎಂದಿದ್ದಾರೆ.
ಪ್ರಧಾನಿ ಮೋದಿಗೆ ತಮ್ಮ ನಾಯಕರ ಮೇಲೆ ನಂಬಿಕೆ ಇಲ್ಲ, ಹಾಗಾಗಿ ಜಿಲ್ಲಾಧಿಕಾರಿಗಳಿಗೆ ಸೂಪರ್ ಪವರ್ ನೀಡಿದ್ದಾರೆ. ಈ ಪ್ಯಾಕೇಜ್ನಿಂದ ನಮಗಂತೂ ಸಮಾಧಾನವಾಗಿಲ್ಲ" ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಬೋಗಸ್ ಪ್ಯಾಕೇಜ್ ಪೋಷಿಸಿದ್ದು, ಮೂಗಿನ ತುಪ್ಪ ಸವರುವ ಬದಲು ಸರ್ಕಾರವೇ ಅವರ ಬೆಳೆ ಖರೀದಿಸುವ ಯೋಜನೆ ಏಕಿಲ್ಲ? ಈ ಅರೆಕಾಸಿನ ಮಜ್ಜಿಗೆಯಂತಹ 10,000 ನೆರವಿನಿಂದ ಯಾವ ಪ್ರಯೋಜನವೂ ರೈತರಿಗಿಲ್ಲ" ಎಂದಿದೆ.
ಮೂಗಿನ ಮೇಲೆ ತುಪ್ಪ ಸವರಿದ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದು, ನಾಲಿಗೆಗೂ ಸಿಗಬಾರದು, ವಾಸನೆಯೂ ಹೋಗಬಾರದು ಎಂಬ ತಂತ್ರಗಾರಿಗೆ ಅವರದ್ದು ಎಂದು ಹೇಳಿದೆ.