ಬೆಂಗಳೂರು, ಮೇ 19 (DaijiworldNews/MS): ರಾಜ್ಯದಲ್ಲಿ ಈಗಾಗಲೇ ಹೇರಲಾಗಿರುವ ಲಾಕ್ ಡೌನ್ ನ್ನು ವಿಸ್ತರಣೆ ಮಾಡುವ ಕುರಿತು ಸದ್ಯ ಯಾವುದೇ ತೀರ್ಮಾನ ಮಾಡಿಲ್ಲ. ಅದನ್ನು ವಿಸ್ತರಿಸುವ ಕುರಿತು 23ಕ್ಕೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಸಂಪುಟದ ಹಿರಿಯ ಸಚಿವರೊಂದಿಗೆ ಸಭೆ ಮುಗಿಸಿದ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಈಗ ಸರ್ಕಾರದ ಇತಿಮಿತಿಯಲ್ಲಿಸಾಧ್ಯವಾದಷ್ಟು ಆರ್ಥಿಕ ಪರಿಹಾರ ಪ್ಯಾಕೇಜ್ ಗಳನ್ನು ಘೋಷಣೆ ಮಾಡಿದ್ದೇವೆ . ಈಗ ಹೇರಲಾಗಿರುವ ಲಾಕ್ ಡೌನ್ ಮೇ 24ಕ್ಕೆ ಮುಗಿಯಲಿದೆ. ಲಾಕ್ ಡೌನ್ ಯಾವ ಮಟ್ಟಿಗೆ ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಪರಿಣಾಮ ಬೀರಿದೆ, ಮುಂದೆ ಕೊರೊನಾ ನಿಯಂತ್ರಣಕ್ಕೆ ಏನು ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ ಎಂದು ಸಚಿವರು, ಅಧಿಕಾರಿಗಳೊಂದಿಗೆ 23ರಂದು ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.
ಕೋವಿಡ್ 19 ಸಾಂಕ್ರಾಮಿಕ 2ನೇ ಅಲೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವಂತ ಸೋಂಕಿತರ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಮೇ.24ರವರೆಗೆ ವಾಣಿಜ್ಯ ಮತ್ತು ಇತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸೋದು ಅನಿವಾರ್ಯವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ, ರಾಜ್ಯವ್ಯಾಪ್ತಿ ಲಾಕ್ ಡೌನ್ ಹೇರಿತ್ತು. ಈ ನಿರ್ಬಂಧದ ನಡುವೆಯು ಕೆಲವು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.