ಬೆಂಗಳೂರು, ಮೇ 19 (DaijiworldNews/MS): ಕೋವಿಡ್ ಎರಡನೇ ಅಲೆಯ ಹೆಚ್ಚಳದ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ವಲಯಗಳ ಕಾರ್ಮಿಕರಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ರಾಜ್ಯಸರ್ಕಾರ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಸಚಿವ ಸಂಪುಟದ ಹಿರಿಯ ಸಚಿವರೊಂದಿಗೆ ಸಭೆ ಮುಗಿಸಿದ ಬಳಿಕ ಪತ್ರಿಕಾಗೋಷ್ಟಿ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚರ್ಚೆ ಮಾಡಿ ತೆಗೆದುಕೊಂಡ ತೀರ್ಮಾನಗಳು, ಪರಿಹಾರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರಕಟಿಸಿದ್ದು ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಆಟೋ, ಕ್ಯಾಬ್ ಚಾಲಕರು ಮತ್ತು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ 3000 ರೂ., ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಪರಿಹಾರ, ಕಲಾವಿದರು, ಕಲಾ ತಂಡಗಳಿಗೆ 3 ಸಾವಿರ ರೂ ಪರಿಹಾರ, ಹೂವು ಬೆಳೆಗಾರರಿಗೆ , ತೋಟಗಾರಿಕೆ ಕೃಷಿಕರಿಗೆ ಹೆಕ್ಟೆರ್ ಗೆ 10 ಸಾವಿರ ರೂ., ಕಲಾವಿದರಿಗೆ ತಲಾ 3000 ರೂ, ಸವಿತಾ ಸಮಾಜದವರಿಗೆ 3 ಸಾವಿರ ಸಹಾಯಧನ ಘೋಷಿಸಲಾಗಿದೆ.
ಗರಿಬ್ ಕಲ್ಯಾಣ ಅಂತ್ಯೋದಯ ಯೋಜನೆ ಅಡಿಯಲ್ಲಿ ರಾಜ್ಯದಿಂದ 180 ಕೋಟಿ, ನೇಕಾರರು, ಕುಂಬಾರರು, ಚಮ್ಮಾರ ಮಡಿವಾಳರು, ಕಮ್ಮಾರರು, ಅಕ್ಕಸಾಲಿಗರು ಟೈಲರ್, ಚಿಂದಿ ಆಯುವವರಿಗೆ, ಹಮಾಲಿಗಳು, ಬೀಡಿ ಕಾರ್ಮಿಕರು ಸೇರಿದಂತೆ ವಿವಿಧ ಸಮುದಾಯಗಳಿಗೆ 2000 ರೂ ಸಹಾಯದ ಘೋಷಣೆ ಮಾಡಲಾಗಿದೆ.
ರೈತರು ಮತ್ತು ಸ್ವಸಹಾಯ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರದಿಂದ 1-5-2020 ರಿಂದ ಮರು ಪಾವತಿಸಬೇಕಾದಂತ ಸಾಲದ ಮೊತ್ತವನ್ನು 31-07-2021 ರವರೆಗೆ ವಿಸ್ತರಣೆ ಮಾಡಲಾಗಿದೆ , 2500 ವೈದ್ಯರನ್ನು ಕೋವಿಡ್ ಚಿಕಿತ್ಸೆಗಾಗಿ ಮೂರು ದಿನದೊಳಗೆ ನೇಮಕ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಲೈನ್ ಮೆನ್ ಗಳು, ಗ್ಯಾಸ್ ಸಿಲಿಂಡರ್ ತಲುಪಿಸೋರನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ, ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.