ನವದೆಹಲಿ, ಮೇ.19 (DaijiworldNews/PY): ಸಿಂಗಾಪುರದ ಕೊರೊನಾ ಹೊಸ ತಳಿ ಕಂಡುಬಂದಿದೆ ಎನ್ನುವ ವದಂತಿಯನ್ನು ಸಿಂಗಾಪುರದ ಆರೋಗ್ಯ ಸಚಿವಾಲಯ ತಳ್ಳಿಹಾಕಿದೆ.
"ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ಸೋಂಕು ಮಕ್ಕಳಿಗೆ ತುಂಬಾ ಆಪಾಯಕಾರಿ ಎನ್ನಲಾಗುತ್ತಿದೆ. ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಬೇಕು" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಬೆನ್ನಲ್ಲೇ ಸಿಂಗಾಪುರ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಂಗಾಪುರ ಸರ್ಕಾರ, "ಸಿಂಗಾಪುರದಲ್ಲಿ ಕೊರೊನಾದ ಹೊಸ ತಳಿ ಕಂಡುಬಂದಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದ ಸುಳ್ಳು ವದಂತಿ" ಎಂದು ತಿಳಿಸಿದೆ.
"ಕೆಲ ವಾರಗಳಲ್ಲಿ ಕಂಡುಬಂದ ಕೊರೊನಾ ಪ್ರಕರಣಗಳಲ್ಲಿ ತಳಿ ಬಿ.1.617.2ರ ರೂಪಾಂತರವಾಗಿದೆ. ಇದು ಭಾರತದಲ್ಲಿ ಹುಟ್ಟಿಕೊಂಡಿತು. ಬಿ.1.617.2 ರೂಪಾಂತರವನ್ನು ಫೈಲೋಜೆನೆಟಿಕ್ ಪರೀಕ್ಷೆಯು ಹಲವು ಕ್ಲಸ್ಟರ್ಗಳ ಜೊತೆ ಸಂಯೋಜಿಸಿದೆ ಎಂದು ತೋರಿಸಿದೆ" ಎಂದು ಮಾಹಿತಿ ನೀಡಿದೆ.
"ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ಸೋಂಕು ಮಕ್ಕಳಿಗೆ ತುಂಬಾ ಆಪಾಯಕಾರಿ. ಇದು ಭಾರತದಲ್ಲಿ ಮೂರನೇ ಅಲೆಯಾಗಿ ಬರಬಹುದು. ಕೇಂದ್ರಕ್ಕೆ ನನ್ನ ಮನವಿ, ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಹಾಗೂ ಲಸಿಕೆ ಹಾಕುವ ಆಯ್ಕೆಗಳಿಗೆ ಮಕ್ಕಳಿಗೂ ಆದ್ಯತೆ ನೀಡಬೇಕು" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಅವರು ನಿನ್ನೆ ಕೇಂದ್ರಕ್ಕೆ ಒತ್ತಾಯಿಸಿದ್ದರು.