ಬೆಂಗಳೂರು, ಮೇ.19 (DaijiworldNews/PY): ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಮೇ 24ರ ತನಕ ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದು, ಮೇ 24ರ ಬಳಿಕವೂ ಈ ಲಾಕ್ಡೌನ್ ಮುಂದುವರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಸಲಿದ್ದು, ತೀವ್ರ ಕುತೂಹಲಕ್ಕೆರಳಿಸಿದೆ.
ಬುಧವಾರ ಬೆಳಗ್ಗೆ 11.30ಕ್ಕೆ ಸಿಎಂ ಬಿಎಸ್ವೈ ಅವರು ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಸುದ್ದಿಗೋಷ್ಠಿಯ ಮೊದಲು ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಈ ಸಂದರ್ಭ ಸಿಎಂ ಅವರು ಲಾಕ್ಡೌನ್ ವಿಸ್ತರಣೆ ಹಾಗೂ ವಿಶೇಷ ಪ್ಯಾಕೇಜ್ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಿಶೇಷ ಪ್ಯಾಕೇಜ್ನಲ್ಲಿ ಯಾರಿಗೆಲ್ಲಾ ನೆರವು?
ಆಶಾ ಕಾರ್ಯಕರ್ತೆಯರಿಗೆ ಸಹಾಯ ಧನ, ಬೀದಿಬದಿ ವ್ಯಾಪಾರಿಗಳಿಗೆ ಹಣದ ನೆರವು, ಹೂ, ತರಕಾರಿ ಬೆಳೆಗಾರರಿಗೆ ಹಣದ ನೆರವು, ಕಟ್ಟಡ ಕಾರ್ಮಿಕರಿಗೆ ಹಣದ ನೆರವು, ಕರೆಂಟ್, ವಾಟರ್ ಬಿಲ್ ಆಧಾರದಲ್ಲಿ ಬಡವರ ಖಾತೆಗೆ ಹಣ, ಮಡಿವಾಳ, ಸವಿತಾ ಸಮುದಾಯಕ್ಕೆ ನೆರವು, ಬಿಪಿಎಲ್ ಕಾರ್ಡ್ ಆಧಾರದಲ್ಲಿ ರೇಷನ್ ಕಿಟ್, 60 ಸಾವಿರ ಮಡಿವಾಳರಿಗೆ 5 ಸಾವಿರ ರೂ. ಪರಿಹಾರ, ಹೂವು ಬೆಳೆದು ನಷ್ಟದಲ್ಲಿರುವ ರೈತರಿಗೆ ಗರಿಷ್ಠ ಒಂದು ಹೆಕ್ಟರ್ಗೆ 25 ಸಾವಿರ ರೂ. ಪರಿಹಾರ, ಹೋಟೆಲ್ ಕಾರ್ಮಿಕರಿಗೆ ಹಣದ ಪ್ಯಾಕೇಜ್ ಸೇರಿದಂತೆ ಹಲವು ಪ್ಯಾಕೇಜ್ಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.
ವಾಟರ್, ಕರೆಂಟ್ ಬಿಲ್ ಪಾವತಿಗೆ 1 ತಿಂಗಳು ಹೆಚ್ಚಿನ ಕಾಲಾವಕಾಶ, ಮನೆ ತೆರಿಗೆ ಪಾವತಿಗೆ ರಿಯಾಯಿತಿ, ಸಮಯಾವಕಾಶ, ಮನೆ ಬಾಡಿಗೆ ಪಾವತಿ ಸಂಬಂಧ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ನಿನ್ನೆ 30, 309 ಜನರಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ 525 ಮಂದಿ ಸಾವನ್ನಪ್ಪಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ 30,309 ಜನರಲ್ಲಿ ಕೊರೊನಾ ಪಾಸಿಟಿವ್ ಸೋಂಕು ಇರುವುದು ಪತ್ತೆಯಾಗಿದ್ದು, ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 58395 ಆಗಿದೆ.
ಇನ್ನು ಇಂದು 525 ಮಂದಿ ಕೊರೊನಾ ಸೋಂಕಿನಿಂದ ಮೃತ ಪಟ್ಟಿದ್ದು, ರಾಜ್ಯದಲ್ಲಿ ಮಹಾಮಾರಿ ಸೋಂಕಿಗೆ ಇದುವರೆಗೆ 22838 ಜನರು ಬಲಿಯಾಗಿದ್ದಾರೆ. ಆಸ್ಪತ್ರೆಗಳಿಂದ 58,395 ಬಿಡುಗಡೆ ಹೊಂದಿದ್ದು, ಇದುವರೆ ರಾಜ್ಯದಲ್ಲಿ ಒಟ್ಟು 16,74,487 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.