ಬೆಂಗಳೂರು, ಮೇ.19 (DaijiworldNews/PY): ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರೂ, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಏತನ್ಮಧ್ಯೆ, ಮೇ ಅಂತ್ಯದ ವೇಳೆಗೆ ರಷ್ಯಾ ಸ್ಪುಟ್ನಿಕ್ ವಿ ಲಸಿಕೆ ಬೆಂಗಳೂರಿನಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.
ಸ್ಪುಟ್ನಿಕ್ ಲಸಿಕೆ ಅಭಿಯಾನವನ್ನು ಪ್ರಾರಂಭ ಮಾಡುವ ಬಗ್ಗೆ ಅಪೋಲೋ ಆಸ್ಪತ್ರೆ ಸಮೂಹ ಹಾಗೂ ಡಾ.ರೆಡ್ಡೀಸ್ ಲ್ಯಾಬ್ನೊಂದಿಗೆ ಒಪ್ಪಂದ ಮಡಿಕೊಳ್ಳಲಾಗಿತ್ತು. ತಕ್ಷಣವೇ ಬೆಂಗಳೂರಿನಲ್ಲಿರುವ ಎಲ್ಲಾ ಅಪೋಲೋ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗಲಿದ್ದು, ಲಸಿಕೆ ಬೆಲೆ 1,200 ರೂ. ನಿಂದ 1,250 ರೂ. ಇರಲಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯ, "ರಷ್ಯಾದ ಡಿಆರ್ಎಲ್ನಿಂದ ಪ್ರಾಯೋಗಿಕ ಭಾಗವಾಗಿ ಸುಮಾರು 1.5 ಲಕ್ಷ ಲಸಿಕೆಗಳು ಶೀಘ್ರವೇ ಬೆಂಗಳೂರಿಗೆ ಆಮದಾಗಲಿವೆ" ಎಂದಿದ್ದಾರೆ.
"ಒಂದು ತಿಂಗಳಲ್ಲಿ ಸುಮಾರು 10 ಲಕ್ಷ ಲಸಿಕೆಗಳು ಲಭ್ಯವಾಗಲಿದೆ. ರೆಡ್ಡೀಸ್ ಲ್ಯಾಬೋರೇಟರಿಯೊಂದಿಗೆ ಅಪೋಲೋ ಆಸ್ಪತ್ರೆ ಸಹಯೋಗ ಹೊಂದಿರುವುದು ಹೆಮ್ಮೆ ಎನಿಸಲಿದೆ" ಎಂದು ಅಪೋಲೋ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸಂಗೀತಾ ರೆಡ್ಡಿ ತಿಳಿಸಿದ್ದಾರೆ.