ನವದೆಹಲಿ, ಮೇ 19 (DaijiworldNews/MS):ಕೊರೋನಾದಿಂದ ಚೇತರಿಸಿಕೊಂಡವರಿಗೆ ಲಸಿಕೆಯನ್ನು 9 ತಿಂಗಳ ಅವಧಿ ಬಳಿಕ ನೀಡಬೇಕು ಎಂದು ಸರ್ಕಾರಿ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ರೋಗನಿರೋಧಕ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್ಟಿಎಜಿಐ) ಸರ್ಕಾರಕ್ಕೆ ಈ ಶಿಫಾರಸು ಮಾಡಿದ್ದು, ಇನ್ನು 1-2 ದಿನದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಈ ಮುನ್ನ ಇದೇ ಸಮಿತಿಯು, ಕೊರೋನಾದಿಂದ ಗುಣಮುಖರಾದವರು ಲಸಿಕೆ ಪಡೆಯಲು 6 ತಿಂಗಳ ಅಂತರವನ್ನು ಸೂಚಿಸಿದ್ದರೆ, ಇದೀಗ ಒಂಬತ್ತು ತಿಂಗಳವರೆಗೆ ಲಸಿಕೆ ಹಾಕಲು ಹೋಗಬಾರದು ಎಂದು ಹೇಳಿದೆ
ಈ ಸಮಿತಿಯೂ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಅಧ್ಯಯನಗಳನ್ನು ಪರಿಶೀಲನೆ ನಡೆಸಿ 6ರ ಬದಲು 9ನೇ ತಿಂಗಳ ನಂತರ ಲಸಿಕೆ ಪಡೆದರೆ ಮರು ಸೋಂಕು ತಾಗುವ ಅಪಾಯ ಇರುವುದಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದೆ.
ಮಾತ್ರವಲ್ಲದೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ವ್ಯಾಕ್ಸಿನೇಷನ್ ಪಡೆಯಬಹುದು ಎಂದು ಸಮಿತಿ ಸೂಚಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಸ್ತುತ ಪ್ರೋಟೋಕಾಲ್ ಪ್ರಕಾರ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರ ನಾಲ್ಕರಿಂದ ಎಂಟು ವಾರಗಳವರೆಗೆ ಲಸಿಕೆ ತೆಗೆದುಕೊಳ್ಳಬೇಕು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ಪಡೆದುಕೊಳ್ಳುವಂತಿರಲಿಲ್ಲ.