ನವದೆಹಲಿ, ಮೇ.19 (DaijiworldNews/PY): ಇಸ್ರೇಲ್ನಲ್ಲಿ ಪ್ಯಾಲೆಸ್ಟೈನ್ ಮೂಲದ ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್ ದಾಳಿಯಿಂದ ಸಾವನ್ನಪ್ಪಿದ್ದ ಕೇರಳದ ಮಹಿಳೆ ಸೌಮ್ಯ ಸಂತೋಷ್ ಮನೆಯವರೊಂದಿಗೆ ಇಸ್ರೇಲ್ ಅಧ್ಯಕ್ಷ ರೂವನ್ ರಿವ್ಲಿನ್ ಅವರು ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಸೌಮ್ಯ ಸಂತೋಷ್ ಮನೆಯವರೊಂದಿಗೆ ರೂವನ್ ರಿವ್ಲಿನ್ ಅವರು ಕರೆ ಮಾತನಾಡಿರುವ ಕುರಿತು ಅವರ ಸಲಹೆಗಾರ ಸುದ್ದಿಸಂಸ್ಥೆಯೊಂದಕ್ಕೆ ಖಚಿತಪಡಿಸಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದ ಸೌಮ್ಯ ಕಳೆದ ಏಳು ವರ್ಷಗಳಿಂದ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್ನ ಮನೆಯೊಂದರಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಸೌಮ್ಯ ಕೇರಳದಲ್ಲಿರುವ ಪತಿ ಸಂತೋಷ್ ಜೊತೆಗೆ ಸಂಜೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾಗ ಸೌಮ್ಯ ನಿವಾಸದ ಮೇಲೆ ರಾಕೆಟ್ ಬಿದ್ದಿದೆ.
ಸೌಮ್ಯ ಅವರಿಗೆ ಒಂಭತ್ತು ವರ್ಷದ ಮಗನಿದ್ದು, ಆತನನ್ನು ಪತಿ ಸಂತೋಷ್ ಜೊತೆ ಕೇರಳದಲ್ಲಿ ಬಿಟ್ಟು ಸೌಮ್ಯ ಅವರು ಇಸ್ರೇಲ್ಗೆ ತೆರಳಿದ್ದರು. ಸೌಮ್ಯ ಅವರು ಮೇ 11ರಂದು ತಮ್ಮ ಪತಿ ಸಂತೋಷ್ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ಸಂದರ್ಭ ಗಾಜಾದಿಂದ ಬಂದ ರಾಕೆಟೊಂದು ಸೌಮ್ಯ ಕೆಲಸ ಮಾಡುತ್ತಿದ್ದ ನಿವಾಸಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಸೌಮ್ಯ ಮೃತಪಟ್ಟಿದ್ದು, ವೃದ್ದ ಮಹಿಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಕೆಟ್ ದಾಳಿಯಿಂದ ರಕ್ಷಣೆ ಪಡೆಯುವ ಕಟ್ಟಡ ಸೌಮ್ಯ ಕೆಲಸ ಮಾಡುತ್ತಿದ್ದ ನಿವಾಸದಿಂದ ಸ್ವಲ್ಪ ದೂರದಲ್ಲಿತ್ತು. ಆದರೆ, ಸೌಮ್ಯ ಅವರಿಗೆ ಅಲ್ಲಿಗೆ ತೆರಳಲು ಸಾಧ್ಯವಾಗಿರಲಿಲ್ಲ. ಮೇ 14ರಂದು ಸೌಮ್ಯ ಅವರ ಮೃತದೇಹವನ್ನು ಕೇರಳಕ್ಕೆ ತರಲಾಗಿತ್ತು.