ನವದೆಹಲಿ, ಮೇ.18 (DaijiworldNews/PY): ಸಿಂಗಾಪುರದಲ್ಲಿ ಕಂಡುಬರುವ ಕೊರೊನಾದ ಹೊಸ ರೂಪಾಂತರದ ಕುರಿತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದು, "ಭಾರತದ ಮೂರನೇ ಅಲೆಗೆ ಸಿಂಗಾಪುರ ವೈರಸ್ ಕಾರಣವಾಗಬಹುದು" ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ಸಿಂಗಾಪುರದ ಜೊತೆಗೆ ವಾಯುಸೇವೆಗಳನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಮಕ್ಕಳಿಗೆ ಲಸಿಕೆ ಚಾಲನೆಗೆ ಆದ್ಯತೆ ನೀಡಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮನವಿ ಮಾಡಿರುವ ದೆಹಲಿ ಸಿಎಂ, "ಸಿಂಗಾಪುರಕ್ಕೆ ಬಂದ ಹೊಸ ರೂಪದ ಕೊರೊನಾ ಸೋಂಕು ಮಕ್ಕಳಿಗೆ ತುಂಬಾ ಆಪಾಯಕಾರಿ ಎನ್ನಲಾಗುತ್ತಿದೆ. ಇದು ಭಾರತದಲ್ಲಿ ಮೂರನೇ ಅಲೆಯಾಗಿ ಬರಬಹುದು. ಕೇಂದ್ರಕ್ಕೆ ನನ್ನ ಮನವಿ, ಸಿಂಗಾಪುರದೊಂದಿಗಿನ ವಿಮಾನ ಸೇವೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಬೇಕು ಹಾಗೂ ಲಸಿಕೆ ಹಾಕುವ ಆಯ್ಕೆಗಳಿಗೆ ಮಕ್ಕಳಿಗೂ ಆದ್ಯತೆ ನೀಡಬೇಕು" ಎಂದು ತಿಳಿಸಿದ್ದಾರೆ.