ಬೆಂಗಳೂರು, ಮೇ.18 (DaijiworldNews/HR): "ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಲು ಲಾಕ್ಡೌನ್ ವಿಸ್ತರಣೆ ಅನಿವಾರ್ಯವಾಗಿದ್ದು, ರಾಜ್ಯದಲ್ಲಿ ಒಂದು ತಿಂಗಳ ಕಾಲ ಲಾಕ್ಡೌನ್ ವಿಸ್ತರಿಸಿ, ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ" ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಮೇ. 24ರ ಬಳಿಕ ಲಾಕ್ಡೌನ್ ವಿಸ್ತರಣೆ ಮಾಡುವುದು ಅನಿವಾರ್ಯ, ಲಾಕ್ ಡೌನ್ ವಿಸ್ತರಿಸದಿದ್ದರೆ ದೊಡ್ಡ ದೊಡ್ಡ ಅನಾಹುತ ಆಗಲಿದೆ. ಹೀಗಾಗಿ ಲಾಕ್ ಡೌನ್ ವಿಸ್ತರಿಸುವುದು ಸೂಕ್ತ, ಲಾಕ್ ಡೌನ್ ಜೊತೆಗೆ ಸರ್ಕಾರ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
"ಕರ್ನಾಟಕದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿಲ್ಲ, ಕೊರೊನಾ ಟೆಸ್ಟ್ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಸಾವು ನೋವುಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವುದಕ್ಕೆ ಹೊರಟಿದೆ" ಎಂದಿದ್ದಾರೆ.
ಇನ್ನು "ರಾಜ್ಯ ಸರ್ಕಾರವು ಜನರ ದಿಕ್ಕು ತಪ್ಪಿಸಿ ಯಡವಟ್ಟು ಮಾಡುತ್ತೀರಿ, ಈಗಾಗಲೇ ಕೊರೊನಾ ವಿಚಾರದಲ್ಲಿ ಬೇಕಾದಷ್ಟು ತಪ್ಪು ಮಾಡಿದ್ದೀರಿ. ಮತ್ತೆ ತಪ್ಪು ಮಾಡಬೇಡಿ" ಎಂದು ಸಲಹೆ ನೀಡಿದ್ದಾರೆ.