ನವದೆಹಲಿ, ಮೇ.18 (DaijiworldNews/PY): ಲಾಕ್ಡೌನ್ ತೀರ್ಮಾನವನ್ನು ಜಿಲ್ಲಾಧಿಕಾರಿಗಳ ಹೆಗಲಿಗೆ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಜಿಲ್ಲೆಯ ಸ್ಥಿತಿಗೆ ತಕ್ಕಂತೆ ತೀರ್ಮಾನ ಕೈಗೊಳ್ಳಿ' ಎಂದು ಹೇಳಿದ್ದಾರೆ.
ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು, "ಜಿಲ್ಲೆಯ ಪರಿಸ್ಥಿತಿ ಜಿಲ್ಲಾಡಳಿತಕ್ಕೆ ಚೆನ್ನಾಗಿ ತಿಳಿದಿರುತ್ತದೆ. ಹಾಗಾಗಿ ಜಿಲ್ಲೆಗೆ ಅನುಗುಣವಾಗಿ ನೀವೇ ತೀರ್ಮಾನ ಕೈಗೊಳ್ಳಿ" ಎಂದು ತಿಳಿಸಿದ್ದಾರೆ.
"ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಲ್ಲಿ ದೇಶವೇ ಗೆದ್ದಂತೆ. ಕಾಳಸಂತೆಕೋರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ. ಈ ಎಲ್ಲದರ ನಡುವೆ ಕೊರೊನಾ ಲಸಿಕೆ ಚಾಲನೆ ಕೂಡಾ ಮುಂದುವರಿಯುತ್ತದೆ. ಅಲ್ಲದೇ ಲಸಿಕೆ ವ್ಯರ್ಥವಾಗದಂತೆ ನೀವೆಲ್ಲರೂ ಸಹ ಖಚಿತಪಡಿಸಿಕೊಳ್ಳಬೇಕು. ಲಸಿಕೆ ವ್ಯರ್ಥವನ್ನು ನಾವು ಕಡಿಮೆ ಮಾಡಬಹುದು" ಎಂದು ಹೇಳಿದ್ದಾರೆ.
"ಕೊರೊನಾ ವಿರುದ್ದ ಹೋರಾಡಲು ವ್ಯಾಕ್ಸಿನೇಷನ್ ಒಂದು ಮಾರ್ಗವಾಗಿದೆ. ಲಸಿಕೆ ಪೂರೈಕೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ. ಕಾರ್ಯಕ್ರಮದ 15 ದಿನಗಳ ಮುಂಗಡ ವೇಳಾಪಟ್ಟಿಯನ್ನು ರಾಜ್ಯಗಳಿಗೆ ಒದಗಿಸುವ ಪ್ರಯತ್ನಗಳು ನಡೆಯುತ್ತಿವೆ" ಎಂದಿದ್ದಾರೆ.
"ಕೊರೊನಾ ಎರಡನೇ ಅಲೆಯ ವೇಳೆ ಗ್ರಾಮೀಣ ಹಾಗೂ ದೂರದ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನಹರಿಸುವುದು ಮುಖ್ಯ" ಎಂದು ತಿಳಿಸಿದ್ದಾರೆ.