ನವದೆಹಲಿ, ಮೇ.18 (DaijiworldNews/HR): ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಅವರನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಈ ಕುರಿತು ಕೆಲವು ನ್ಯಾಯಾಲಯ ನಡೆಸುತ್ತಿರುವ ವಿಚಾರಣೆಗೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ ಎಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ದ ದಾಖಲೆಗಳನ್ನು ಒದಗಿಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ನ್ಯಾಯಾಮೂರ್ತಿ ಸುರೇಶಕುಮಾರ್ ಕೈಟ್ ಅವರು ಚಿದಂಬರಂ ಹಾಗೂ ಇತರರಿಗೆ ನೋಟಿಸ್ ನೀಡಿದ್ದಾರೆ.
ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಚಿದಂಬರಂ ಅವರು, ವಿದೇಶಿ ಬಂಡವಾಳ ಉತ್ತೇಜನಾ ಮಂಡಳಿಯು 305 ಕೋಟಿ ವಿದೇಶಿ ಹೂಡಿಕೆಯನ್ನು ಸ್ವೀಕರಿಸಲು ಐಎನ್ಎಕ್ಸ್ ಮೀಡಿಯಾಕ್ಕೆ ಅನುಮತಿ ನೀಡಿದ್ದು, ಈ ರೀತಿ ಅನುಮತಿ ನೀಡುವ ವೇಳೆ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 2017ರಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎನ್ನಲಾಗಿದೆ.