ತಿರುವನಂತಪುರಂ, ಮೇ 18 (DaijiworldNews/MS): ನಿಫ ವೈರಸ್ ಹಾಗೂ ಕೊರೊನಾ ಪರಿಸ್ಥಿತಿಯನ್ನು ದೇಶದಲ್ಲೇ ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದ ಕೇರಳದ ಮಾಜಿ ಸಚಿವ ಶೈಲಜಾ ಟೀಚರ್ ಅವರನ್ನು ಈ ಬಾರಿ ಸಂಪುಟದಿಂದ ಕೈಬಿಡಲಾಗಿದೆ. ಕೇರಳದಲ್ಲಿ ಪಿಣರಾಯ್ ವಿಜಯನ್ ನೇತೃತ್ವದ 2.0 ಕ್ಯಾಬಿನೆಟ್ ನಲ್ಲಿ ಕೆ.ಕೆ.ಶೈಲಜಾ ಅವರಿಗೆ ಈ ಬಾರಿ ಸಚಿವ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಅನಿರೀಕ್ಷಿತ ಬೆಳವಣಿಗೆಯಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊರತುಪಡಿಸಿ, ನೂತನ ಸರ್ಕಾರದಲ್ಲಿ ಹೊಸ ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಹೀಗಾಗಿ ಕೆ. ಕೆ. ಶೈಲಜಾ ಅವರನ್ನು ಹೊರಗಿಡಲು ಸಿಪಿಎಂ ನಿರ್ಧರಿಸಿದೆ.
60,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಶೈಲಜಾ ಅವರು ಈ ಬಾರಿ ಚುನಾವಣೆಯಲ್ಲಿ ಜಯಗಳಿಸಿದ್ದು , ಸಂಪುಟದಿಂದ ಕೈಬಿಡುವ ಸಿಪಿಎಂ ನ ಈ ನಿರ್ಧಾರ ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ ಎಂದು ವರದಿ ತಿಳಿಸಿದೆ.
ಗೌರಿ ಅಮ್ಮ ಮತ್ತು ಸುಶೀಲಾ ಗೋಪಾಲನ್ ನಂತರ ಕೇರಳದ ಅತ್ಯುತ್ತಮ ಮಹಿಳಾ ಸಿಪಿಎಂ ನಾಯಕಿ ಶೈಲಜಾ ಎಂದು ಪ್ರಸಿದ್ಧರಾಗಿದ್ದಾರೆ.
ಶೈಲಜಾ ಟೀಚರ್' ಎಂದೇ ಕೇರಳ ಜನತೆಯಿಂದ ಹೆಸರು ಪಡೆದಿರುವ ಕೆ.ಕೆ ಶೈಲಜಾ, 2017-18 ರಲ್ಲಿ ವಕ್ಕರಿಸಿದ ನಿಫಾ ವೈರಸ್ ಮತ್ತು 2019ರ ಕೋವಿಡ್ ಸೇರಿದಂತೆ ಮಾರಣಾಂತಿಕ ಸಾಂಕ್ರಾಮಿಕ ರೋಗಗಳನ್ನು ತನ್ನ ರಾಜ್ಯದಲ್ಲಿ ಸಮರ್ಥವಾಗಿ ನಿರ್ವಹಿಸಿದ ಮಹಿಳೆ. ಇವರ ಕೆಲಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಆರೋಗ್ಯ ಕ್ಷೇತ್ರದ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಕೇರಳಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕೆ.ಕೆ.ಶೈಲಜಾ ಅವರನ್ನು ಕೇರಳದ ಭವಿಷ್ಯದ ಮುಖ್ಯಮಂತ್ರಿ ಎಂದು ಅನೇಕ ಜನರು ಬಣ್ಣಿಸಿದ್ದಾರೆ.