ಬೆಂಗಳೂರು, ಮೇ.18 (DaijiworldNews/HR): "ಕರ್ನಾಟಕದಲ್ಲಿ ಕೊರೊನಾದ ಎರಡನೇ ಅಲೆ ಹಿನ್ನೆಲೆಯಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪುನರ್ವಸತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದ್ದು, 18 ವರ್ಷದೊಳಗಿನ ಮಕ್ಕಳ ಕ್ವಾರೆಂಟೈನ್ ಗಾಗಿ ಒಂದು ವಸತಿಶಾಲೆ ನಿರ್ಧರಿಸಲಾಗಿದೆ ಮತ್ತು ಅನಾಥ ಮಕ್ಕಳನ್ನು ದತ್ತು ಕೇಂದ್ರದ ಮೂಲಕ ದತ್ತು ನೀಡಲಾಗುವುದು, ಆದರೆ ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಯಾರಿಗೂ ಅವಕಾಶವಿಲ್ಲ" ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕೊರೊನಾದ ಎರಡನೆಯ ಅಲೆಯಲ್ಲಿ ತಂದೆ ತಾಯಿ ಕಳೆದುಜೊಂಡು ಅನಾಥವಾಗಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳಲ್ಲಿ ತೆರೆಯಲು ತೀರ್ಮಾನಿಸಲಾಗಿದೆ" ಎಂದರು.
ಮೂವತ್ತು ಜಿಲ್ಲೆಗಳಲ್ಲಿ ಕೋವಿಡ್ ಮಕ್ಕಳಿಗಾಗಿ ಕೊವಿಡ್ ಕೇರ್ ಕೇಂದ್ರ ಆರಂಭಿಸಲಾಗುತ್ತಿದ್ದು, 993 ಸಂಸ್ಥೆಗಳು ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 33 ಮಕ್ಕಳ ದತ್ತು ಕೇಂದ್ರಗಳಿವೆ. 1098 ನಂಬರ್ ಗೆ ಕಾಲ್ ಮಾಡಬಹುದು. ಈಗಾಗಲೇ 23613 ಕರೆಗಳು ಬರುತ್ತಿವೆ. ಪ್ರತಿ ತಿಂಗಳು ಕೊರೊನಾ ಸಂಬಂಧಿತ 137 ಕರೆಗಳು ಬರುತ್ತಿದ್ದು, ಮೂವತ್ತು ಜಿಲ್ಲೆಗಳಲ್ಲಿ ಮಕ್ಕಳು ಹೆಚ್ಚಾದರೆ ವಿಶೇಷ ಮಕ್ಕಳ ಶಾಲೆಗಳನ್ನು ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದಿದ್ದಾರೆ.
"ತಂದೆ ತಾಯಿ ಕಳೆದುಕೊಂಡ ಮಗುವನ್ನು ಹತ್ತಿರದ ಸಂಬಂಧಿಗಳು ನೋಡಿಕೊಳ್ಳಲು ಒಪ್ಪಿಕೊಂಡರೆ ಅವರಿಂದ ಒಪ್ಪಿಗೆ ಪತ್ರ ಬರೆಸಿಕೊಂಡು ಅವರಿಗೆ ಜವಾಬ್ದಾರಿ ನೀಡಲಾಗುವುದು. ಅನಾಥ ಮಕ್ಕಳನ್ನು ದತ್ತು ಕೇಂದ್ರದ ಮೂಲಕ ದತ್ತು ನೀಡಲಾಗುವುದು. ನೇರವಾಗಿ ಮಕ್ಕಳನ್ನು ದತ್ತು ಪಡೆಯಲು ಯಾರಿಗೂ ಅವಕಾಶವಿಲ್ಲ. ಯಾವುದೇ ಮಗುವಾಗಿದ್ದರೂ ಅದನ್ನು ಇಲಾಖೆ ವ್ಯಾಪ್ತಿಗೆ ಒಪ್ಪಿಸಿ ನಂತರ ದತ್ತು ಪಡೆಯುವ ಪ್ರಕ್ರಿಯೆ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನಂಬದೆ ನೇರವಾಗಿ ಪರಿಶೀಲಿಸಬೇಕು. ಮಕ್ಕಳ ಭವಿಷ್ಯದ ಜೊತೆಗೆ ಆಟವಾಡುವುದು ಬೇಡ" ಎಂದು ಹೇಳಿದ್ದಾರೆ.
ಇನ್ನು ಇಬ್ಬರು ಮಕ್ಕಳು ಅನಾಥವಾಗಿದ್ದರೆ ಇಬ್ಬರನ್ನೂ ಒಟ್ಟಿಗೆ ಇಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ನೇರವಾಗಿ ದತ್ತು ಪಡೆಯುವುದು ಕಾನೂನು ಬಾಹಿರವಾಗಿದ್ದು, ಅದರ ವಿರುದ್ದ ಬಾಲ ನ್ಯಾಯ ಕಾಯ್ದೆ 2015 ಹಾಗೂ ಅಡಾಪ್ಶನ್ ರೆಗ್ಯುಲೇಷನ್ 2017 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.