ನವದೆಹಲಿ, ಮೇ.18 (DaijiworldNews/PY): ಕುಸ್ತಿಪಟುವೋರ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಣೆ ಮಾಡಿದ್ಧಾರೆ.
ದೆಹಲಿಯ ಹತ್ರಾಸ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ರಾಣಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಹುಡುಕುತ್ತಿದ್ದಾರೆ.
ಸುಶೀಲ್ ಕುಮಾರ್ ಅವರ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಇನ್ನೋರ್ವ ಆರೋಪಿ ಅಜಯ್ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ದೆಹಲಿ ಕೋರ್ಟ್ ಸುಶೀಲ್ ಕುಮಾರ್ ಹಾಗೂ ಇತರೆ ಆರು ಮಂದಿಯ ವಿರುದ್ದ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಹತ್ರಾಸ್ ಸ್ಟೇಡಿಯಂ ಪಾರ್ಕಿಂಗ್ ಪ್ರದೇಶದಲ್ಲಿ ಜಗಳವಾಡುವ ಸಂದರ್ಭ ಸಾಗರ್ ರಾಣಾ ಅವರಿಗೆ ಥಳಿಸಲಾಗಿದ್ದು, ಘಟನೆಯ ಬಳಿಕ ಸುಶೀಲ್ ಕುಮಾರ್ ವಿರುದ್ದ ಹತ್ಯೆ ಹಾಗೂ ಅಪಹರಣ ಹಾಗೂ ಕ್ರಿಮಿನಲ್ ಪಿತೂರಿಯ ಎಫ್ಐಆರ್ ದಾಖಲಿಸಲಾಗಿತ್ತು.
"ಮೇ 4ರಂದು 97 ಕೆಜಿ ಗ್ರೀಕೋ-ರೋಮನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಗರ್ ರಾಣಾ ಅವರನ್ನು ಎರಡು ಗುಂಪುಗಳು ಒಳಗೊಂಡ ಘರ್ಷಣೆಯಲ್ಲಿ ಹತ್ಯೆ ಮಾಡಲಾಯಿತು. ಈ ವೇಳೆ ಕ್ರೀಡಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಸುಶೀಲ್ ಕುಮಾರ್ ಸೇರಿದಂತೆ ಪ್ರಿನ್ಸ್ ದಲಾಲ್, ಅಮಿತ್, ಅಜಯ್, ಸಾಗರ್, ಸೋನು ಹಾಗೂ ಇತರರ ಮಧ್ಯೆ ಜಗಳ ನಡೆದಿದೆ ಎಂದು ತನಿಖೆಯ ಸಂದರ್ಭ ತಿಳಿದುಬಂದಿದೆ" ಎಂದು ಪೊಲೀಸರು ಹೇಳಿದ್ದಾರೆ.