ಬೆಂಗಳೂರು, ಮೇ 18 (DaijiworldNews/MS): ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತವೂ ಕುಂಟು ಕುದುರೆಯ ಮೇಲೆ ಕುರುಡನ ಸವಾರಿ'ಯಂತಾಗಿದ್ದು, ಮೋದಿ ಭಜನೆ ಬಿಟ್ಟು ಬೇರೇನೂ ಮಾಡಲಿಲ್ಲ ಈ ಬಿಜೆಪಿಗರು ಎಂದು ರಾಜ್ಯ ಸರ್ಕಾರದ ವಿರುದ್ದ ವ್ಯಂಗ್ಯವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮೂಲಕ ರಾಜ್ಯ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ " ಕುಂಟು ಕುದುರೆಯ ಮೇಲೆ ಕುರುಡನ ಸವಾರಿಯಂತಿರುವ ಆಡಳಿತದಿಂದ ಎಲ್ಲಿ ಹಾರುತ್ತದೋ, ಎಲ್ಲಿ ಬೀಳುತ್ತದೋ ತಿಳಿಯದೆ ಕಣ್ಮುಚ್ಚಿಕೊಂಡು 'ದೇವರೇ ಗತಿ' ಎನ್ನುವ ಸ್ಥಿತಿಗೆ ಬಂದಿದ್ದಾರೆ ಜನ. ಹಪಹಪಿಯಿಂದ ವಾಮಮಾರ್ಗದಲ್ಲಿ ಅಧಿಕಾರ ಹಿಡಿದವರಿಂದ ರಾಜ್ಯಕ್ಕೆ ನಿರಂತರ ಸಂಕಷ್ಟವೇ ಎಂದು ಹೇಳಿದೆ.
ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಾಗ ನೆರೆ ಹಾವಳಿ, ಆ ಸಂದರ್ಭದಲ್ಲಿ ಸಂಪುಟವೇ ಇರಲಿಲ್ಲ. ಆನಂತರ ನೆರೆ ಪರಿಹಾರ ತರುವಲ್ಲಿಯೂ 25 ಸಂಸದರ ಸಹಿತ ಇಡೀ ಸರ್ಕಾರ ಸೋತಿದ್ದ ಪರಿಣಾಮ ಇಂದಿಗೂ ರಾಜ್ಯದ ಜನತೆ ಚೇತರಿಸಿಕೊಳ್ಳಲಿಲ್ಲ.ಎರಡೆರೆದು ಭಾರಿ ನೆರೆ ಬಂದಾಗಲೂ ಕೇಂದ್ರದ ಅಸಡ್ಡೆ ಧೋರಣೆಯನ್ನು ಪ್ರಶ್ನಿಸದೆ ಹೇಡಿಗಳಾಗಿ ಕುಳಿತರು.ನೆರೆ, ಬರದ ಸಂಕಷ್ಟದ ನಂತರ ರಾಜ್ಯಕ್ಕೆ ಕರೋನಾ ಭೀಕರತೆ ಎದುರಾಯಿತು, ಆಗಲೂ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತೆ ವಿನಃ ಜನರ ಕೈ ಹಿಡಿಯಲಿಲ್ಲ ಎಂದು ಆರೋಪಿಸಿದೆ.
2ನೇ ಅಲೆಯ ಬಗ್ಗೆ ತಜ್ಞರ ಎಚ್ಚರಿಕೆಯನ್ನು ಕಡೆಗಣಿಸಿ, ಸಂಪುಟ ಕಿತ್ತಾಟ, ಸಿಡಿ ರಂಪಾಟದಲ್ಲಿ ಮುಳುಗಿತ್ತು ಬೇಜವಾಬ್ದಾರಿ ಬಿಜೆಪಿ ಸರ್ಕಾರ.ಬಲ್ ಇಂಜಿನ್ ಸರ್ಕಾರಗಳಿಂದ ಅಭಿವೃದ್ಧಿಯ ಮಹಾಪರ್ವವೇ ಶುರುವಾಗಲಿದೆ ಎಂದು ಪುಂಗಿ ಊದಿದವರು 15ನೇ ಹಣಕಾಸು ಆಯೋಗದಲ್ಲಿ ಬರಬೇಕಾದ ಹಣವನ್ನೂ ಕೇಳಲಿಲ್ಲ, ಜಿಎಸ್ ಟಿ ಬಾಕಿ ಕೇಳಲಿಲ್ಲ, ನೆರೆ ಪರಿಹಾರ 1500 ಕೋಟಿ ಬಿಟ್ಟು ಮತ್ತೆ ಬರಲೇ ಇಲ್ಲ. ಇಷ್ಟೆಲ್ಲಾ ಅನ್ಯಾಯವಾದರೂ ಮೋದಿ ಭಜನೆ ಬಿಟ್ಟು ಬೇರೇನೂ ಮಾಡಲಿಲ್ಲ ಬಿಜೆಪಿಗರು. ಈಗ ಕರೋನಾ 2ನೇ ಅಲೆಯಿಂದ ರಾಜ್ಯ ಸ್ಮಶಾನದಂತಾಗುತ್ತಿದೆ ಎಂದು ಟೀಕಿಸಿದೆ
ಮೋದಿಯವರನ್ನು ಚಮತ್ಕಾರಿ ಬಾಬಾ ಎಂಬಂತೆ ಬಹುಪರಾಕ್ ಹಾಕುವ ಬಿಜೆಪಿ ಸಂಸದರು, ಸಚಿವರು ಆಕ್ಸಿಜನ್, ಪಿಎಂ ಕೇರ್ಸ್, ವ್ಯಾಕ್ಸಿನ್ ಎಲ್ಲದರಲ್ಲಿಯೂ ಕೇಂದ್ರ ಸರ್ಕಾರದ ಅನ್ಯಾಯವನ್ನು ಗಟ್ಟಿಯಾಗಿ ಪ್ರಶ್ನಿಸುವ ಧೈರ್ಯ ತೋರದೆ ಸರ್ವಾಧಿಕಾರಿಯ ಗುಲಾಮರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದ ಬಗೆಗೆ ಕೇಂದ್ರ ಸರ್ಕಾರದ ಈ ಅಸಡ್ಡೆ, ದ್ವೇಷ ಯಡಿಯೂರಪ್ಪನವರ ಕಾರಣಕ್ಕೋ, ಕನ್ನಡಿಗರ ಮೇಲಿನ ಅಸಹನೆಯ ಕಾರಣಕ್ಕೋ ಎನ್ನುವುದನ್ನ ಬಿಜೆಪಿಗರೇ ಉತ್ತರಿಸಬೇಕು. ಬಿಎಸ್ ವೈ ಮುಕ್ತ ಬಿಜೆಪಿ ಮಾಡುವ ಇವರ ಅಜೆಂಡಾದ ಆಂತರಿಕ ಕಿತ್ತಾಟದಲ್ಲಿ ಕನ್ನಡಿಗರು ತಬ್ಬಲಿಗಳಾಗುತ್ತಿದ್ದಾರೆ, ಈ ತುರ್ತು ಪರಿಸ್ಥಿತಿಯ ನಡುವೆಯೂ ಬಿಜೆಪಿ ವಿ/ಎಸ್ ಬಿಜೆಪಿ ಬೇಕೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.