ನವದೆಹಲಿ, ಮೇ.18 (DaijiworldNews/PY): "ದೇಶದಲ್ಲಿ ಮತ್ತೆ ಯಶಸ್ಸು ಕಾಣಲು ಕಾಂಗ್ರೆಸ್ ಪಕ್ಷ ಬಿಜೆಪಿಯಂತೆ ದೊಡ್ಡ ಮಟ್ಟದಲ್ಲಿ ಯೋಚನೆ ಮಾಡಬೇಕಾಗುತ್ತದೆ" ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ಸಂದರ್ಶವೊಂದರಲ್ಲಿ ಮಾತನಾಡಿದ ಅವರು, "ಬಿಜೆಪಿಯವರು ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಿದ್ದಾರೆ. ಅವರು ತಮ್ಮ ಅಸ್ತಿತ್ವ ಇಲ್ಲದ ಕಡೆ ದೊಡ್ಡ ಮಟ್ಟದ ಸಾಧನೆ ಮಾಡಲು ಯತ್ನಿಸುತ್ತಿದ್ದಾರೆ" ಎಂದಿದ್ದಾರೆ.
"ನಾವು ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆಗಳಲ್ಲಿ ಕಳೆದುಕೊಂಡಿದ್ದನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ನಾವು ಸಣ್ಣವರು, ನಮ್ಮ ಗಾತ್ರ ಚಿಕ್ಕದು ಅಥವಾ ಒಂದು ಪ್ರದೇಶದಲ್ಲಿ ದೊಡ್ಡದಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ನಾವು ಭಾವಿಸಬಾರದು. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಚುನಾವಣೆಯಿಂದ ನಾವು ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಹಲವು ಕಡೆ ನಾವು ಸೋತಿದ್ದೇವೆ ಅಥವಾ ಇನ್ನು ಎಂದಿಗೂ ಮೇಲೇಳಲು ಆಗುವುದಿಲ್ಲ ಎಂಬ ನಿರಾಶಾದಾಯವಾದ ಧೋರಣೆ ಕಾಂಗ್ರೆಸ್ಗೆ ಸೂಕ್ತವಲ್ಲ. ಆತ್ಮವಿಶ್ವಾಸ ಹಾಗೂ ಬದ್ದತೆಯಿಂದ ಯೋಚನೆ ಮಾಡುವುದು ಉತ್ತಮ" ಎಂದಿದ್ದಾರೆ.
"ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯು ಜನರ ಮಧ್ಯೆ ಇರುವ ಪ್ರಣಾಳಿಕೆಯಾಗಿದೆ. ಉಪಾಯ ಎಂದರೆ ಜನರು ಏನನ್ನು ಬಯಸುತ್ತಾರೆ ಹಾಗೂ ಅದನ್ನು ನಮ್ಮಿಂದ ನೀಡಲು ಸಾಧ್ಯವೇ ಎನ್ನುವುದನ್ನು ನೋಡಬೇಕು. ಈ ಬಗ್ಗೆ ಹೆಚ್ಚು ವಿಶ್ಲೇಷಣಾತ್ಮಕವಾಗಬೇಕು" ಎಂದು ಹೇಳಿದ್ದಾರೆ.
"ನಾವು ಜಾತಿ ಹಾಗೂ ಸಮುದಾಯಗಳ ಉದ್ದಕ್ಕೂ ವಿಭಜನೆಯ ಸಮಸ್ಯೆಯನ್ನು ಎದುರಿಸುತ್ತಿದ್ದು. ಹಾಗೂ ಇದು ಒಂದು ಅವಧಿಯಲ್ಲಿ ಪರಿಹರಿಸಲ್ಪಡುತ್ತದೆ. ಇದು ಅಪೇಕ್ಷಿಸಬಹುದಾದ ಸಂಗತಿ ಆಗಬಾರದು" ಎಂದಿದ್ದಾರೆ.