ನವದೆಹಲಿ, ಮೇ.18 (DaijiworldNews/PY): ಕೊರೊನಾ ಪ್ರಕರಣಗಳು ಅಧಿಕವಿರುವ ರಾಜ್ಯ ಹಾಗೂ ಆಯಾ ಜಿಲ್ಲಾಧಿಕಾರಿಗಳ ಜೊತೆ ಮೇ18ರ ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಹಾಗೂ ಮುಂದಿನ ಯೋಜನೆ ಬಗ್ಗೆ, ಮಾರ್ಗೋಪಾಯಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಹಿಮಾಚಲ ಪ್ರದೇಶ, ದೆಹಲಿ, ಬಿಹಾರ, ಉತ್ತರಾಖಂಡ, ಅಸ್ಸಾಂ, ಮಧ್ಯ ಪ್ರದೇಶ, ಚಂಡೀಗಢ ಹಾಗೂ ಗೋವಾದ ಜಿಲ್ಲಾಧಿಕಾರಿಗಳು ಪ್ರಧಾನಿ ಮೋದಿ ಅವರೊಂದಿಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೊರೊನಾ ಸೋಂಕು ಪ್ರಕರಣಗಳು ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ವರದಿಯಾಗುತ್ತಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನಿ ಕಚೇರಿ, "ಮಂಗಳವಾರದ ಸಭೆಯಲ್ಲಿ 9 ಜಿಲ್ಲೆಗಳ 46 ಜಿಲ್ಲಾ ಮ್ಯಾಜಿಸ್ಟ್ರೇಟರ್ಗಳು ಸಹ ಪಾಲ್ಗೊಳ್ಳಲಿದ್ದಾರೆ" ಎಂದು ತಿಳಿಸಿದೆ.
ಮೇ 20ರ ಗುರುವಾರ ಸಹ ಹತ್ತು ರಾಜ್ಯಗಳ 54 ಜಿಲ್ಲೆಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಧಾನಿ ಮೋದಿ ಸಭೆ ನಿಗದಿಯಾಗಿದೆ.