ನವದೆಹಲಿ, ಮೇ.17 (DaijiworldNews/HR): ನಾರದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಸುಬ್ರತೋ ಮುಖರ್ಜಿಯನ್ನು ಬಂಧಿಸಿದ ಘಟನೆಯ ಬಳಿಕ ಕೋಲ್ಕತಾ ಸಿಬಿಐ ಕಚೇರಿಗೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿ, ತನ್ನನ್ನು ಬಂಧಿಸಿ ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಮಮತಾ ಬ್ಯಾನರ್ಜಿ ನಿಜಾಮ್ ಪ್ಯಾಲೇಸ್ನಲ್ಲಿರುವ ಸಿಬಿಐ ಕಚೇರಿಗೆ ಆಗಮಿಸಿ ಸುಮಾರು 45 ನಿಮಿಷಗಳ ಕಾಲ ಚರ್ಚೆ ನಡೆಸಿದ ವೇಳೆ ಅಸಮಾಧಾನಗೊಂಡು ತನ್ನನ್ನು ಬಂಧಿಸಲು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಟಿಎಂಸಿಯ ಸಚಿವರನ್ನು ಬಂಧಿಸಿದ ಬಳಿಕ ಸಿಬಿಐ ಕಚೇರಿಯ ಹೊರಭಾಗದಲ್ಲಿ ಪಕ್ಷದ ಬೆಂಬಲಿಗರು ಗುಂಪುಗೂಡಿ ಸಿಬಿಐ ಕಚೇರಿ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ನಡೆದಿದ್ದು, ರಾಜ್ಯಪಾಲ ಜಗದೀಪ್ ಧಾನ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಇದು ಕಾನೂನು ಬಾಹಿರ ಅರಾಜಕತೆ ಎಂದು ಆರೋಪಿಸಿ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾದಿತು ಎಚ್ಚರಿಕೆ ನೀಡಿದೆ.
ನಾರದ ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ಪಶ್ಚಿಮಬಂಗಾಳ ಕ್ಯಾಬಿನೆಟ್ ಮಂತ್ರಿಗಳಾದ ಫಿರ್ಹಾದ್ ಹಕೀಮ್ , ಸುಬ್ರತಾ ಮುಖರ್ಜಿ ಹಾಗೂ ಟಿಎಂಸಿ ಶಾಸಕ ಮದನ್ ಮಿತ್ರ, ಪಶ್ಚಿಮಬಂಗಾಳದ ಮಾಜಿ ಸಚಿವ ಸೋವನ್ ಚಟರ್ಜಿಯನ್ನು ಬಂಧಿಸಿತ್ತು.