ನವದೆಹಲಿ, ಮೇ.17 (DaijiworldNews/HR): ಕೊರೊನಾ ಲಸಿಕೆಯನ್ನು ವಿದೇಶಕ್ಕೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಣ ಪಡೆದು ದೆಹಲಿಯ ತುಂಬೆಲ್ಲಾ ಪೋಸ್ಟರ್ ಅಂಟಿಸಿದ್ದು ನಮ್ಮ ಪಕ್ಷದ ಕಾರ್ಯಕರ್ತರು ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.
ಭಾರತದಲ್ಲಿ ಕೊರೊನಾ ಲಸಿಕೆ ಅಭಾವಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ಟೀಕಿಸಿ ದೆಹಲಿಯ ಅನೇಕ ಕಡೆಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಭಿತ್ತಿಪತ್ರಗಳನ್ನು ಅಂಟಿಸಿರುವ ಆರೋಪದಡಿ ದೆಹಲಿ ಪೊಲೀಸರು 25 ಜನರನ್ನು ಬಂಧಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷ, "ಕೊರೊನಾ ಲಸಿಕೆ ರಫ್ತು ಮಾಡಿದ್ದನ್ನು ಪ್ರಶ್ನಿಸಿ ಪ್ರಧಾನಿ ಮೋದಿ ವಿರುದ್ಧ ಪೊಸ್ಟರ್ಗಳನ್ನು ಅಂಟಿಸಿದ್ದು ನಮ್ಮ ಪಕ್ಷದ ಕಾರ್ಯಕರ್ತರು. ನಿಮ್ಮ ವಿರುದ್ಧ ಭಿತ್ತಿಪತ್ರಗಳನ್ನು ಅಂಟಿಸಿದ ಕಾರಣಕ್ಕೆ ಬಡ ಜನರಿಗೆ ಕಿರುಕುಳ ನೀಡಬೇಡಿ" ಎಂದಿದೆ.
ಇನ್ನು "ದೆಹಲಿ ಪೊಲೀಸರ ಕ್ರಮಕ್ಕೆ ಎಎಪಿ ಹೆದರುವುದಿಲ್ಲ, ಈ ರೀತಿಯ ಭಿತ್ತಿಪತ್ರಗಳನ್ನು ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದಾದ್ಯಂತ ಅಂಟಿಸುತ್ತಿವೆ" ಎಂದು ಎಎಪಿ ಮುಖಂಡ ದುರ್ಗೇಶ್ ಪಾಠಕ್ ತಿಳಿಸಿದ್ದಾರೆ.