ನವದೆಹಲಿ, ಮೇ 17 (DaijiworldNews/MS): ಕೇಂದ್ರ ಸರ್ಕಾರ ನೇಮಕ ಮಾಡಿದ್ದ ವೈಜ್ಞಾನಿಕ ಸಲಹಾ ಸಮಿತಿ (ಐಎನ್ಎಸ್ಎಸಿಒಜಿ)ಯ ಅಧ್ಯಕ್ಷ, ಖ್ಯಾತ ಹಿರಿಯ ವೈರಾಣು ತಜ್ಞ ಶಾಹಿದ್ ಜಮೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವೈರಾಲಜಿಸ್ಟ್ ಶಾಹಿದ್ ಜಮೀಲ್ ಈ ಹಿಂದೆ ಕೇಂದ್ರ ಸರ್ಕಾರದ ಕೊರೊನಾ ಸಾಂಕ್ರಮಿಕ ನಿರ್ವಹಣೆಯ ರೀತಿಯನ್ನು ಟೀಕಿಸಿದ್ದರು. ರಾಜೀನಾಮೆಗೆ ದೃಢಪಡಿಸಿರುವ ಅವರು ತಮ್ಮ ನಿರ್ಗಮನಕ್ಕೆ ಯಾವುದೇ ಕಾರಣಗಳನ್ನು ನೀಡದಿದ್ದರೂ 'ಇದು ಸೂಕ್ತ ನಿರ್ಧಾರ ಮತ್ತು ನಾನು ಇನ್ನು ಹೆಚ್ಚು ಹೇಳಲು ಏನೂ ಇಲ್ಲ' ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.
2020ರ ಡಿಸೆಂಬರ್ನಲ್ಲಿ ಭಾರತದಲ್ಲಿ SARS-CoV-2 ನ ಬದಲಾವಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು 10 ಪ್ರಯೋಗಾಲಯಗಳ ಜಾಲವಾಗಿ ಜೀನೋಮಿಕ್ಸ್ ಕನ್ಸೋರ್ಟಿಯಂ (ಐಎನ್ಎಸ್ಎಸಿಒಜಿ) ಎಂಬ ಸಮಿತಿ ಸ್ಥಾಪಿಸಲಾಗಿತ್ತು.
ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ನಿರ್ವಹಣೆ ಕುರಿತು ಶಾಹಿದ್ ಜಮೀಲ್ ಟೀಕಿಸಿದ್ದರು. ತಜ್ಞರ ಸಲಹೆಗಳಿಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಡಾ. ಜಮೀಲ್ ಅವರ ರಾಜೀನಾಮೆ ನಿರ್ಧಾರ ಹಠಾತ್ ಆಗಿದ್ದು, ಐಎನ್ಎಸ್ಎಸಿಒಜಿ ಸದಸ್ಯರಲ್ಲಿ ಒಬ್ಬರು "ಸರ್ಕಾರದ ಒತ್ತಡ" ವನ್ನು ಸಂಭಾವ್ಯ ಕಾರಣವೆಂದು ಉಲ್ಲೇಖಿಸಿದ್ದಾರೆ.