ಸಿಲಿಗುರಿ, ಮೇ.16 (DaijiworldNews/PY): "ಲಾಕ್ಡೌನ್ ನಿಯಮ ಉಲ್ಲಂಘಿಸಿದ ಆರೋಪದಡಿ ಬಿಜೆಪಿಯ ಮೂವರು ಶಾಸಕರನ್ನು ರವಿವಾರ ಬಂಧಿಸಿದ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ" ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಬಿಜೆಪಿ ಮೂವರು ಶಾಸಕರನ್ನು ಶಂಕರ್ ಘೋಶ್, ಆನಂದಮೊಯಿ ಬರ್ಮನ್ ಹಾಗೂ ಶಿಖಾ ಚಟ್ಟೋಪಾಧ್ಯಾಯ ಎಂದು ಗುರುತಿಸಲಾಗಿದೆ.
"ಉತ್ತರ ಬಂಗಾಳದಲ್ಲಿ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಲ್ಲಿ ಕೊರತೆ ಇದೆ ಎಂದು ಆರೋಪಿಸಿ ಬಿಜೆಪಿ ಮೂವರು ಶಾಸಕರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆ ಮೂವರನ್ನು ಬಂಧಿಸಿದ್ದಾರೆ. ನಂತರ ಅವರನ್ನು ಬಿಡುಗಡೆಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
"ನಾವು ಸಫ್ದರ್ ಹಶ್ಮಿ ಚೌಕ್ನಲ್ಲಿ ಧರಣಿ ನಡೆಸಿದ್ದು, ಈ ಸಂದರ್ಭ ನಾವು ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿದ್ದೆವು. ಅಲ್ಲದೇ, ಆ ಸ್ಥಳದಲ್ಲಿ ಯಾರೂ ಇರಲಿಲ್ಲ" ಎಂದು ಶಾಸಕರು ತಿಳಿಸಿದ್ದಾರೆ.
"ಬಿಜೆಪಿ ಶಾಸಕರು ಧರಣಿ ನಡೆಸುವ ಮೂಲಕ ಜನರಿಗೆ ದ್ರೋಹವೆಸಗಿದ್ದಾರೆ. ಬಿಜೆಪಿ ನಾಯಕರ ನಿಜ ಮುಖ ಜನರಿಗೆ ತಿಳಿಯಬೇಕು. ಸೋಂಕು ವ್ಯಾಪಿಸುತ್ತಿರುವ ಬಗ್ಗೆ ಇವರಿಗೆ ಯಾವುದೇ ಕಾಳಜಿ ಇಲ್ಲ. ಇಂತಹ ಸಂದರ್ಭವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಪಶ್ಚಿಮಬಂಗಾಳ ಸರ್ಕಾರ ಎಲ್ಲಾ ರೀತಿಯಾದ ಕ್ರಮಗಳನ್ನು ಕೈಗೊಳ್ಳುತ್ತಿದೆ" ಎಂದು ಟಿಎಂಸಿ ನಾಯಕ ಗೌತಮ್ ಕಿಡಿಕಾರಿದ್ದಾರೆ.