ಬೆಂಗಳೂರು, ಮೇ.16 (DaijiworldNews/PY): "ಬ್ಲ್ಯಾಕ್ ಫಂಗಸ್ ಬಗ್ಗೆ ಈಗಾಗಲೇ ಎಚ್ಚರ ವಹಿಸಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ನಾಳೆಯಿಂದ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಶೇಷ ಚಿಕಿತ್ಸೆಯನ್ನು ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಸುತ್ತೇವೆ" ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬ್ಲ್ಯಾಕ್ ಫಂಗಸ್ಗೆ ಸತತ ಏಳು ವಾರಗಳ ಚಿಕಿತ್ಸೆಯ ಅಗತ್ಯವಿದೆ. ಒಬ್ಬ ವ್ಯಕ್ತಿಗೆ 2-3 ಲಕ್ಷ ಖಚಾಗುತ್ತದೆ. ಉಚಿತ ಚಿಕಿತ್ಸೆಗೆ ಸಿಎಂ ಅವರೊಂದಿಗೆ ಇಂದೇ ನಾನು ಮಾತನಾಡುತ್ತೇನೆ. ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡಲ್ಲಿ ತಕ್ಷಣವೇ ಹೋಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಅಧಿಕ ಸ್ಟಿರಾಯ್ಡ್ ಬಳಕೆ, ರೋಗ ನಿರೋಧಕ ಶಕ್ತಿ ಇರುವವರಿಗೆ ಈ ಬ್ಲ್ಯಾಕ್ ಫಂಗಸ್ ಬರುತ್ತದೆ. ಮಧುಮೇಹ ಇರುವವರಿಗೆ ಕೊರೊನಾ ಸೋಂಕು ತಗುಲಿದ ಬಳಿಕ ಬರುತ್ತದೆ. ಮೂಗಿನ ಮುಖೇನ ಈ ಫಂಗಲ್ ಇನ್ಫೆಕ್ಷನ್ ಆಗುತ್ತದೆ. ಇದಕ್ಕೆ ಸರಿಯಾಗಿ ಚಿಕಿತ್ಸೆ ಆಗದೇ ಇದ್ದಲ್ಲಿ ಸಾವು ಸಂಭವಿಸಬಹದು. ಬ್ಲ್ಯಾಕ್ ಫಂಗಸ್ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡ ತಕ್ಷಣವೇ ನೇತ್ರ ತಜ್ಞರೊಂದಿಗೆ ಚರ್ಚಿಸಿದ್ದೇವೆ. ಜಿಲ್ಲಾಸ್ಪತ್ರೆಗಳಲ್ಲಿ ಈ ಬಗ್ಗೆ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು" ಎಂದಿದ್ದಾರೆ.
"ವೈದ್ಯರ ಸಲಹೆಯ ಮೇರೆಗೆ ಸ್ಟಿರಾಯ್ಡ್ ಬಳಕೆ ಮಾಡಿ. ವೈದ್ಯರು ಅನಗತ್ಯವಾಗಿ ಸ್ಟಿರಾಯ್ಡ್ ನೀಡಬಾರದು, ವೈದ್ಯರು ಎಚ್ಚರಿಕೆಯಿಂದ ಚಿಕಿತ್ಸೆ ನೀಡಬೇಕು. ಈವರೆಗೆ ಎಷ್ಟು ಮಂದಿಗೆ ಬ್ಲ್ಯಾಕ್ ಫಂಗಸ್ ಬಂದಿದೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಇದಕ್ಕೆ ಸಮಿತಿ ರಚನೆ ಮಾಡಲಾಗುತ್ತದೆ. ಈ ಬಗ್ಗೆ ಸಮಿತಿ ಸಲಹೆ ನೀಡಲಿದೆ" ಎಂದು ತಿಳಿಸಿದ್ದಾರೆ.
"ದೇಶದಲ್ಲೇ ಈ ಔಷಧಿಯ ಕೊರತೆ ಇದೆ. 20 ಸಾವಿರ ವೈಲ್ಸ್ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ನಾವು ಬೇಡಿಕೆ ಇಟ್ಟಿದ್ದೇವೆ. ನಾನು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಜೊತೆ ಸಂಪರ್ಕದಲ್ಲಿದ್ದೇನೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೂ ಚರ್ಚೆ ಮಾಡುತ್ತೇವೆ" ಎಂದಿದ್ದಾರೆ.
"ನಾವು ಐಸಿಎಂಆರ್ ಸೂಚನೆ ಹಾಗೂ ನಿಯಮದ ಅನ್ವಯ ಕಿಟ್ ವಿತರಿಸುತ್ತಿದ್ದೇವೆ. ಯಾವುದಾದರೂ ಸಂಘ-ಸಂಸ್ಥೆಗಳು ಮುಂದೆ ಬಂದಲ್ಲಿ ಅವರ ಮುಖೇನ ಕಿಟ್ ವಿತರಿಸುತ್ತೇವೆ. ಆದರೆ, ನಿಯಮವನ್ನು ಪಾಲಿಸದೇ ಕಾಂಗ್ರೆಸ್ನವರು ಕಿಟ್ ವಿತರಿಸುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.