ನವದೆಹಲಿ, ಮೇ.16 (DaijiworldNews/PY): "ದೇಶದ ಪ್ರಸ್ತುತ ಪರಿಸ್ಥಿತಿಗೆ ಸರ್ಕಾರ, ಆಡಳಿತ ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿರುವುದೇ ಕಾರಣ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆನ್ಲೈನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,"ಕೊರೊನಾದ ಮೊದಲನೇ ಅಲೆಯ ಬಳಿಕ ವೈದ್ಯರು ಎಷ್ಟೇ ಎಚ್ಚರಿಕೆ ನೀಡಿದ್ದರೂ ಕೂಡಾ ಸರ್ಕಾರ, ಆಡಳಿತ ವರ್ಗ ಹಾಗೂ ಸಾರ್ವಜನಿಕರು ನಿರ್ಲಕ್ಷ್ಯ ವಹಿಸಿದ್ದರು. ಹಾಗಾಗಿ ಈ ಸ್ಥಿತಿ ಎದುರಾಗಿದೆ" ಎಂದಿದ್ದಾರೆ.
"ಇಂತಹ ಪರಿಸ್ಥಿಯ ವೇಳೆ ದೇಶದ ಜನತೆ ಇತರರ ಮೇಲೆ ಆರೋಪ ಮಾಡಬಾರದು. ಬದಲಾಗಿ ಒಗ್ಗಟ್ಟಾಗಿ, ತಂಡಗಳಾಗಿ ಕೆಲಸ ಮಾಡಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವ ಮೂಲಕ ಕೊರೊನಾ ವಿರುದ್ದ ಹೋರಾಡಬೇಕಿದೆ" ಎಂದು ತಿಳಿಸಿದ್ದಾರೆ.
"ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡುವುದು ಸೂಕ್ತವಲ್ಲ. ಜನರು ಧೃತಿಗೆಡದೇ, ದೃಢ ನಿಶ್ಚಯ ಹೊಂದಿರಬೇಕು. ಇಂತಹ ಸಂದರ್ಭಗಳೇ ನಮ್ಮನ್ನು ಮುಂದಿನ ಭವಿಷ್ಯಕ್ಕೆ ಸಿದ್ದಗೊಳಿಸುತ್ತದೆ. ಇಲ್ಲಿ ಯಶಸ್ಸು ಅಂತಿಮವಲ್ಲ. ಸೋಲು ಕೂಡಾ ಕೊನೆಯಲ್ಲ. ಇಲ್ಲಿ ಆತ್ಮಸ್ಥೈರ್ಯ ಮುಖ್ಯ" ಎಂದು ಹೇಳಿದ್ದಾರೆ.