ಬೆಂಗಳೂರು, ಮೇ.16 (DaijiworldNews/PY): ಕೆ"ಪಿಸಿಸಿ ವತಿಯಿಂದ ರೂ.100 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಸಿ ಐಸಿಎಂಆರ್ ನಿಗದಿಪಡಿಸಿರುವ ನಿಯಮಗಳಡಿ ಲಸಿಕೆ ನೀಡಲು ನಾವು ಸಿದ್ಧರಿದ್ದು, ಜನರ ಪ್ರಾಣ ಉಳಿಸುವ ನಮ್ಮ ಈ ಕಾರ್ಯಕ್ರಮಕ್ಕೆ ಶೀಘ್ರ ಅನುಮೋದನೆ ನೀಡಬೇಕು" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೋರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಬಿಎಸ್ವೈ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, "ಶಾಸಕರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಕ್ಷೇತ್ರಗಳ ಅಭಿವೃದ್ದಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ತಲಾ 1 ಕೋಟಿ ರೂ. ಗಳನ್ನು ಒಟ್ಟು 100 ಕೋಟಿ. ರೂ. ಬಳಸಿ ಜನರಿಗೆ ಲಸಿಕೆ ನೀಡಲು ಅವಕಾಶ ನೀಡಬೇಕು" ಎಂದು ಕೋರಿದ್ದಾರೆ.
"ಪಕ್ಷದ ಮೇಲ್ಮನೆ ಹಾಗೂ ಕೆಳಮನೆಯನ್ನು ಪ್ರತಿನಿಧಿಸುತ್ತಿರುವ ಸಾಸಕರು, ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಕ್ಷೇತ್ರಗಳ ಅಭಿವೃದ್ದಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಲ್ಲಿ ತಲಾ 1 ಕೋಟಿ ರೂ. ಗಳನ್ನು ಲಸಿಕೆ ಖರೀದಿಸಿ ಜನರಿಗೆ ನೀಡಲು ಉದ್ದೇಶಿಸಿದ್ದೇವೆ. ಇದರಿಂದ ಸುಮಾರು 90 ಕೋಟಿ. ರೂ.ಗಳು ಸಂಗ್ರಹವಾಗುತ್ತದೆ. ಇನ್ನುಳಿದ ಹತ್ತು ಕೋಟಿ. ರೂ.ಗಳನ್ನು ಪಕ್ಷದ ವತಿಯಿಂದ ನೀಡಿ ಒಟ್ಟು 100 ಕೋಟಿ ರೂ. ಗಳಲ್ಲಿ ಲಸಿಕೆ ಖರೀದಿ ಮಾಡಿ ಐಸಿಎಂಆರ್ ನಿಗದಿಪಡಿಸಿರುವ ನಿಯಮಗಳಂತೆ ಲಸಿಕೆ ನೀಡುತ್ತೇವೆ. ಆದ್ದರಿಂದ ವಿಳಂಬಕ್ಕೆ ಅವಕಾಶ ನೀಡದೇ ಶೀಘ್ರವೇ ಈ ಯೋಜನೆಗೆ ಅನುಮೋದನೆ ನೀಡಬೇಕು" ಎಂದು ಮನವಿ ಮಾಡಿದ್ದಾರೆ.
"ಕೇಂದ್ರ ಸರ್ಕಾರ ಲಸಿಕೆ ವಿಚಾರದಲ್ಲಿ ಯಾಮಾರಿದೆ. ಸರ್ಕಾರ ತಪ್ಪು ಮಾಡಿದೆ ಎಂದರೆ ಬಿಜೆಪಿಯ ಹಲವು ಮುಖಂಡರು ಜನರನ್ನು, ವಿರೋಧ ಪಕ್ಷಗಳನ್ನು, ಮಾಧ್ಯಮಗಳನ್ನು ನಿಂದಿಸುತ್ತಾ ಕೂತಿದ್ದಾರೆ. ಕೊರೊನಾ ನಿಯಂತ್ರಿಸಬೇಕಾದರೆ ಲಸಿಕೆಯೊಂದೇ ಪರಿಹಾರ ಎಂದು ನಾವು ಆರಂಭದಿಂದಲೂ ಹೇಳುತ್ತಾ ಬಂದಿದ್ದೇವೆ" ಎಂದಿದ್ದಾರೆ.
"ವಿರೋಧ ಪಕ್ಷಗಳನ್ನು ಟೀಕಿಸುವ ಮುಖಂಡರು ನಾಲ್ಕೈದು ತಿಂಗಳ ಹಿಂದಕ್ಕೆ ಹೋಗಿ ನೋಡಿ. ಸ್ವತಃ ಪ್ರಧಾನ ಮಂತ್ರಿಗಳೇ, ನಾವು ಕೊರೊನಾ ವಿರುದ್ದ ಗೆದ್ದು ಬಿಟ್ಟದ್ದೇವೆ ಎಂದಿದ್ದರು. ನಾನು ಈ ಕತ್ತಲ ಸುರಂಗದ ಕೊನೆಯನ್ನು ತಲುಪಿಬಿಟ್ಟಿದ್ದೇವೆ ಎಂದು ಆರೋಗ್ಯ ಮಂತ್ರಿಗಳು ಹೇಳಿದ್ದರು. ಜನರು ಈ ಮಾತುಗಳನ್ನು ನಂಬಿ ಉತ್ಸಾಹದಿಂದ ದುಡಿಯುವ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಆಗಲೇ ಕೊರೊನಾದ ಎರಡನೇ ಅಲೆ ಅಪ್ಪಳಿಸಿತು. ಅಸಂಖ್ಯಾತ ಮಂದಿ ಕೊರೊನಾಗೆ ಬಲಿಯಾದರು. ಬಿಲಯಾದ ಜನರನ್ನು ಆಡಳಿತ ಮಾಡುತ್ತಿರುವ ಸರ್ಕಾರಗಳೇ ಹತ್ಯೆ ಮಾಡಿವೆ ಎಂದರೆ ತಪ್ಪೇನು?. ಆಕ್ಸಿಜನ್, ಔಷಧಿ, ಬೆಡ್ಗಳಿಲ್ಲದೇ ಮರಣ ಹೊಂದಿದೆ ಅದರ ಜವಾಬ್ದಾರಿ ಯಾರು ಹೊರಬೇಕು?. ತಜ್ಞರು ನೀಡಿದ ಎಚ್ಚರಿಕೆ, ಸಲಹೆಗಳನ್ನು ಕಸದ ಬುಟ್ಟಿಗೆ ಎಸೆದು ಜನರನ್ನು ಕೊಂದವರೇ ಹೊರಬೇಕಲ್ಲವೇ?" ಎಂದು ಪ್ರಶ್ನಿಸಿದ್ದಾರೆ.