ಬೆಂಗಳೂರು, ಮೇ.15 (DaijiworldNews/HR): ಕರ್ನಾಟಕದ ಗ್ರಾಮೀಣ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೊರೊನಾ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡದಿರಲು ನಿರ್ಧರಿಸಿದ್ದು, ಅಂತಹ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೊರೊನಾ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ನಿರ್ಧಾರ ಕೈಗೊಂಡಿದೆ ಎಂದು ರಾಜ್ಯ ಕೊರೊನಾ ಕಾರ್ಯಪಡೆ ಅಧ್ಯಕ್ಷ ಹಾಗೂ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಡಾ.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಶನಿವಾರ ನಾಲ್ಕು ಗಂಟೆಗಳ ಕಾಲ ನಡೆದ ಕಾರ್ಯಪಡೆಯ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಹಳ್ಳಿಗಳಲ್ಲಿ ವಾಸಿಸುವ ಸೋಂಕಿರನ್ನು ಯಾವುದೇ ಕಾರಣಕ್ಕೂ ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡುವುದಿಲ್ಲ, ಪಾಸಿಟಿವ್ ಆಗಿದೆ ಎಂದು ವರದಿ ಬಂದ ತಕ್ಷಣವೇ ಹತ್ತಿರದ ಕೊರೊನಾ ಕೇಂದ್ರಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುವುದು" ಎಂದರು.
ಇನ್ನು "ನಗರ-ಪಟ್ಟಣ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸ ಮಾಡುವ ಸೋಂಕಿತರಿಗೂ ಇದೇ ರೀತಿಯಲ್ಲಿ ಸ್ಥಳಾಂತರ ಮಾಡಿ ಉಚಿತ ಚಿಕಿತ್ಸೆ ಕೊಡಲಾಗುವುದು. ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ, ಔಷಧಿ ನೀಡಲು ಸುಲಭವಾಗುತ್ತದೆ" ಎಂದಿದ್ದಾರೆ.
ಆರೋಗ್ಯ ಸಿಬ್ಬಂದಿಗಳು ಗ್ರಾಮೀಣ ಭಾಗ ಹಾಗೂ ನಗರದ ಕೊಳೆಗೇರಿಗಳಿಗೆ ತೆರಳಿ ಮನೆ ಮನೆಯಲ್ಲೂ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ `ಕೊರೊನಾ ಕೇಂದ್ರದಲ್ಲಿಯೇ ಇರಬೇಕು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಕೊರೊನಾ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿನ ಹಾಸ್ಟೆಲ್ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದ್ದು, ಇದರ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು.
ಇನ್ನು ಕರ್ನಾಟಕದಲ್ಲಿ ಆಕ್ಸಿಜನ್ ಬಳಕೆ, ತಯಾರಿಕೆ, ಮೂಲಸೌಕರ್ಯ ಸ್ಥಾಪನೆ, ಘಟಕಗಳ ಸ್ಥಾಪನೆ, ನಿರ್ವಹಣೆ ಇತ್ಯಾದಿ ಅಂಶಗಳ ಬಗ್ಗೆ ಇನ್ನು 3-4 ದಿನಗಳಲ್ಲಿ ಹೊಸ ಆಕ್ಸಿಜನ್ ನೀತಿಯನ್ನು ರೂಪಿಸಲಾಗುವುದು ಹಾಗೂ ರಾಜ್ಯದಲ್ಲಿ ಈಗಾಗಲೇ ಆಮ್ಲಜನಕ ಕೊರತೆ ಬಹುತೇಕ ಸರಿಹೋಗಿದೆ" ಎಂದು ಹೇಳಿದ್ದಾರೆ.