ಉಜ್ಜಯನಿ, ಮೇ.15 (DaijiworldNews/PY): ಸರ್ಕಾರಿ ವೈದ್ಯರ ತಂಡವೊಂದು ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವರ ನಿವಾಸಕ್ಕೆ ತೆರಳಿ ಕುಟುಂಬದ ಸದಸ್ಯರು ಸೇರಿದಂತೆ ಸಿಬ್ಬಂದಿ ಹಾಗೂ ಬೆಂಬಲಿಗರಿಗೆ ಕೊರೊನಾ ಲಸಿಕೆ ನೀಡಿದೆ ಎನ್ನುವ ಆರೋಪ ಕೇಳಿಬಂದಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಅಲ್ಲಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, "ಸರ್ಕಾರಿ ವೈದ್ಯರು ಬೇರೆಯವರ ಮನೆಗೆ ತೆರಳಿ ಲಸಿಕೆ ನೀಡಲು ಅವಕಾಶವಿಲ್ಲ. ಈ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಅದೇಶ ನೀಡಿದ್ದೇನೆ" ಎಂದಿದ್ದಾರೆ.
"ಲಸಿಕೆ ಪಡೆಯಲು ಸಾಮಾನ್ಯ ನಾಗರಿಕರು ತೊಂದರೆ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಿ ವೈದ್ಯರು ಫಿರೋಜಿಯಾ ನಿವಾಸಕ್ಕೆ ತೆರಳಿ ಲಸಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ" ಎಂದು ಕಾಂಗ್ರೆಸ್ ಹೇಳಿದೆ.
ಅನಿಲ್ ಫಿರೋಜಿಯಾ ನಿವಾಸದ ಒಳಗೆ ಲಸಿಕೆ ಪಡೆಯುತ್ತಿರುವ ಚಿತ್ರವನ್ನು ಬಿಜೆಪಿ ಕಾರ್ಯಕರ್ತ ಕಪಿಲ್ ಕಟಾರಿಯಾ ಎನ್ನುವವರು ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಫಿರೋಜಿಯಾ ಅವರಿಗೆ ಧನ್ಯವಾದ ತಿಳಿಸಿದ್ದರು.
ಇನ್ನು ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಫಿರೋಜಿಯಾ, "ತಮ್ಮ ನಿವಾಸಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ವೈದ್ಯಕೀಯ ತಂಡವನ್ನು ಕರೆದುಕೊಂಡು ಬಂದಿದ್ದಾರೆ. ಇದು ನನ್ನ ಅರಿವಿಗೆ ಬಂದಿರಲಿಲ್ಲ. ವೈದ್ಯರ ತಂಡವನ್ನು ಅಲ್ಲಿಗೆ ಕಳುಹಿಸಲು ಯಾರು ಅನುಮತಿ ನೀಡಿದರು ಎನ್ನುವ ಕುರಿತು ಮಾಹಿತಿ ನೀಡುವಂತೆ ನಾನು ಅಧಿಕಾರಿಗಳನ್ನು ಕೇಳಿದ್ದೇನೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಸಂಸದರು ತಮ್ಮನ್ನು ವಿಐಪಿ ಎಂದು ಭಾವಿಸಿಕೊಂಡು ವೈದ್ಯಕೀಯ ತಂಡವನ್ನು ಮನೆಗೆ ಕರೆಸಿಕೊಂಡಿದ್ದಾರೆ. ಫಿರೋಜಿಯಾ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕು" ಎಂದು ಮಧ್ಯಪ್ರದೇಶ ಕಾಂಗ್ರೆಸ್ ಒತ್ತಾಯಿಸಿದೆ.