ನವದೆಹಲಿ, ಮೇ 15 (DaijiworldNews/MB) : ಮೋದಿಜೀ ನಮ್ಮ ಮಕ್ಕಳ ಲಸಿಕೆ ವಿದೇಶಕ್ಕೆ ಕಳಿಸಿದ್ದೇಕೆ? ಎಂದು ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ಆರೋಪದಲ್ಲಿ ದೆಹಲಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.
ದೆಹಲಿಯ ಹಲವು ಭಾಗಗಳಲ್ಲಿ ಮೋದಿಜೀ ನಮ್ಮ ಮಕ್ಕಳ ಲಸಿಕೆ ವಿದೇಶಕ್ಕೆ ಕಳಿಸಿದ್ದೇಕೆ? ಎಂದು ಬರೆದಿರುವ ಪೋಸ್ಟರ್ಗಳನ್ನು ಅಂಟಿಸಲಾಗಿತ್ತು. ಈ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಾಗಿದೆ. ದೆಹಲಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದು 17 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನು ಈಗಾಗಲೇ ತನಿಖೆ ಆರಂಭಿಸಿ, ಹಲವರನ್ನು ಬಂಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ದೂರುಗಳು ಬಂದರೆ, ಇನ್ನಷ್ಟು ಎಫ್ಐಆರ್ಗಳು ದಾಖಲಾಗುವ ಸಾಧ್ಯತೆಗಳಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈಶಾನ್ಯ ದೆಹಲಿಯಲ್ಲಿ ಬಂಧನಕ್ಕೆ ಒಳಗಾಗಿರುವ ಓರ್ವ ಆರೋಪಿಯು ನನಗೆ ಈ ಕೆಲಸ ಮಾಡಲು 500 ರೂ. ನೀಡಿದ್ದರು ಎಂದು ವಿಚಾರಣೆ ವೇಳೆ ಹೇಳಿದ್ದಾನೆ. ಇನ್ನೊಬ್ಬ ವ್ಯಕ್ತಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ.