ಬೆಂಗಳೂರು, ಮೇ.15 (DaijiworldNews/PY): "ಕೊರೊನಾ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿಲ್ಲ ಬದಲಾಗಿ ಪರೀಕ್ಷೆ ಮಾಡುವ ವಿಧಾನವನ್ನು ಬದಲಾಯಿಸಲಾಗಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಇಂದು ಕೆ.ಆರ್.ಮಾರ್ಕೆಟ್ನಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯಿಂದ ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ಪೂರೈಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಪರೀಕ್ಷೆ ಪ್ರಮಾಣ ಕಡಿಮೆಯಾಗಿಲ್ಲ. ಪರೀಕ್ಷಾ ವಿಧಾನ ಬದಲಾಗಿದೆ ಅಷ್ಟೇ. ಪಾಸಿಟಿವ್ ವರದಿ ಬಂದವರ ಕುಟುಂಬ ಹಾಗೂ ಸುತ್ತಮುತ್ತಲಿನವರ ಟೆಸ್ಟ್ ನಡೆಯುತ್ತಿದೆ. ಲಾಕ್ಡೌನ್ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ. ಆ ಕಾರಣದಿಂದ ಪರೀಕ್ಷಾ ಪ್ರಮಾಣ ಕಡಿಮೆಯಾಗಿರಬಹುದು" ಎಂದಿದ್ದಾರೆ.
ಲಾಕ್ಡೌನ್ ಮುಂದುವರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಲಾಕ್ಡೌನ್ ವಿಸ್ತರಣೆ ಬಗ್ಗೆ ಸಿಎಂ ಮಟ್ಟದಲ್ಲಿ ಇನ್ನೂ ಯಾವುದೇ ಚರ್ಚೆ ಆಗಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಂಕಿ-ಅಂಶಗಳನ್ನು ಪಡೆಯುತ್ತಿದ್ದಾರೆ. ಇಂದು ಟಾಸ್ಕ್ ಫೋರ್ಸ್ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. ಟಾಸ್ಕ್ ಪೋರ್ಸ್ನ ಸಭೆಯ ನಿರ್ಧಾರದ ಮಾಹಿತಿ ಪಡೆದು ತೀರ್ಮಾನ ತೆಗದುಕೊಳ್ಳುತ್ತಾರೆ" ಎಂದು ಹೇಳಿದ್ದಾರೆ.