ಕೊಲ್ಕತ, ಮೇ.15 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 16 ರಿಂದ 30 ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ.
ಈ ಲಾಕ್ಡೌನ್ ನಾಳೆ ಬೆಳಿಗ್ಗೆ 6 ಗಂಟೆಯಿಂದ ಜಾರಿಯಾಗಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಸೀಮಿತ ಅವಕಾಶವಿರಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.
ಬಂಗಾಳದಲ್ಲಿ ಶುಕ್ರವಾರದಂದು 20,846 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 36 ಜನ ಕರೊನಾ ಸಂಬಂದವಾಗಿ ಸಾವಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇನ್ನು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯವರೆಗೆ ಕಾಲಾವಕಾಶ ಮಾಡಿಕೊಟ್ಟಿದ್ದು, ಹಣ್ಣು, ತರಕಾರಿ, ಹಾಲು, ಬ್ರೆಡ್ನಂತಹ ಅಗತ್ಯ ವಸ್ತುಗಳನ್ನು ಮಾರುವ ಮಾರುಕಟ್ಟೆಗಳು ಈ ಸಮಯದಲ್ಲಿ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.
ಬ್ಯಾಂಕ್ಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲಿದ್ದು, ಅಗತ್ಯ ಸೇವೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಓಡಾಟ ಹೊರತುಪಡಿಸಿ, ರಾತ್ರಿ ಕರ್ಫ್ಯೂ ಮುಂದುವರಿಯಲಿದೆ.
ಇನ್ನು ಯಾವುದೇ ರಾಜಕೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಜನ ಸೇರಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಆದೇಶಿಸಿದೆ.