ಬೆಂಗಳೂರು, ಮೇ.15 (DaijiworldNews/HR): ಕೊರೊನಾ ವ್ಯಾಕ್ಸಿನ್ ನೀಡುವ ಮಾಹಿತಿಯನ್ನೊಳಗೊಂಡ ಕೋವಿನ್ ಆ್ಯಪ್ ಕೆಲವು ಲೋಪಗಳು ಅಥವಾ ಸೀಮಿತ ಪರಿಧಿಯನ್ನು ಹೊಂದಿದ್ದು, ತಮ್ಮ ಆಯ್ಕೆಯ ಕೇಂದ್ರ ಯಾವುದು ಎಂಬುದನ್ನು ಅರಿಯಲು ಹೆಚ್ಚು ಅವಕಾಶ ಇಲ್ಲವಾಗಿದೆ. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ಹೆಚ್ಚಾಗುತ್ತಿರುವುದರಿಂದ ಪ್ರತ್ಯೇಕ ಪೋರ್ಟಲ್ ಅಥವಾ ಆ್ಯಪ್ ಅನ್ನು ಕರ್ನಾಟಕ ರಾಜ್ಯ ಸರ್ಕಾರ ಸಿದ್ಧಪಡಿಸುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು, "18 ವರ್ಷದಿಂದ 44 ವರ್ಷ ವಯಸ್ಸಿನವರಿಗೆ ಲಸಿಕೆ ಕೊಡಲು ಆರಂಭಿಸುವ ವೇಳೆಗೆ ಈ ಪೋರ್ಟಲ್ ಅಥವಾ ಆ್ಯಪ್ ಸಿದ್ಧವಿರುತ್ತದೆ" ಎಂದರು.
ಇನ್ನು ಕೋವಿನ್ ಆ್ಯಪ್ ಕೆಲವು ಸೀಮಿತ ಅವಕಾಶಗಳನ್ನು ಹೊಂದಿದ್ದು, ಒನ್ ಟೈಮ್ ಪಾಸ್ವರ್ಡ್ ಕೋಡ್ ಜನರೇಶನ್ ಅಂತಹ ಟೆಕ್ನಿಕಲ್ ಸಮಸ್ಯೆಗಳು ಇದ್ದು, ಇದನ್ನು ಮೀರಲು ನಾವೇ ಹೊಸ ಆ್ಯಪ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಹೊಸ ಆ್ಯಪ್ ನಲ್ಲಿ ಮುಖ್ಯವಾಗಿ ಆಯಾ ಪ್ರದೇಶದ ಜನ ತಮ್ಮ ಪ್ರದೇಶದಲ್ಲಿರುವ ಲಸಿಕಾ ಕೇಂದ್ರದಲ್ಲಿಯೇ ವ್ಯಾಕ್ಸಿನ್ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಕಡ್ಡಾಯವಾಗಲಿದ್ದು, ಪ್ರಸ್ತುತ ಜನರು ಲಸಿಕೆ ಸಿಗುತ್ತಿಲ್ಲ ಎಂಬ ಆತಂಕದಲ್ಲಿ ಗ್ರಾಮೀಣ ಭಾಗದತ್ತ ಅಥವಾ ಅಕ್ಕಪಕ್ಕದ ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಪರದಾಡುತ್ತಿದ್ದು, ಇದರಿಂದ ಅನಗತ್ಯ ಜನದಟ್ಟಣೆ, ಸಂಚಾರವನ್ನು ತಡೆಗಟ್ಟಬಹುದು" ಎಂದು ಹೇಳಿದ್ದಾರೆ.