ನವದೆಹಲಿ, ಮೇ 15 (DaijiworldNews/MB) : 2021ರ ನೂತನ ಗೌಪ್ಯತಾ ಪರಿಷ್ಕರಣೆಯು ಕಡ್ಡಾಯವಲ್ಲ ಹಾಗೂ ಅದನ್ನು ಒಪ್ಪಿಕೊಳ್ಳಲು ಯಾವುದೇ ಬಳಕೆದಾರರನ್ನು ಒತ್ತಾಯಿಸುವುದಿಲ್ಲ. ಬಳಕೆದಾರರು ವಾಟ್ಸಾಪ್ ಬಳಕೆ ನಿಲ್ಲಿಸಲು ಸ್ವತಂತ್ರರು. ಯಾವ ಸಂದರ್ಭದಲ್ಲೂ ಅವರು ತಮ್ಮ ಖಾತೆಯನ್ನು ಅಳಿಸಿ ಹಾಕಬಹುದು ಎಂದು ದೆಹಲಿ ಹೈಕೋರ್ಟ್ಗೆ ಫೇಸ್ಬುಕ್ ಒಡೆತನದ ವಾಟ್ಸಾಪ್ ಅಫಿಡವಿಟ್ನಲ್ಲಿ ತಿಳಿಸಿದೆ.
ನೂತನ ಗೌಪ್ಯತಾ ನೀತಿಯನ್ನು ವಾಪಾಸ್ ಪಡೆಯಲು ಅಥವಾ ಬಳಕೆದಾರರಿಗೆ ಹೊರಗುಳಿಯುವ ಆಯ್ಕೆಯನ್ನು ಒದಗಿಸಲು ವಾಟ್ಸಾಪ್ಗೆ ಆದೇಶಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಮನವಿ ಮಾಡಿ ಡಾ. ಸೀಮಾ ಸಿಂಗ್, ಮೇಘನ್ ಮತ್ತು ವಿಕ್ರಮ್ ಸಿಂಗ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ಸಂಬಂಧಿಸಿ ವಾಟ್ಸಾಪ್ ಹೈಕೋರ್ಟ್ ಮುಂದೆ ತನ್ನ ಪ್ರಾಥಮಿಕ ಅಫಿಡವಿಟ್ ಸಲ್ಲಿಸಿದೆ.
ನೂತನ ಗೌಪ್ಯತಾ ನೀತಿ ನವೀಕರಣದಲ್ಲಿ ಹಸ್ತಕ್ಷೇಪ ಮಾಡುವುದರಿಂದ ಇಂಟರ್ನೆಟ್ ಆಧಾರಿತ ಅಪ್ಲಿಕೇಶನ್ಗಳು ಮತ್ತು ವೆಬ್ಸೈಟ್ಗಳ ಉದ್ಯಮವನ್ನೇ ದುರ್ಬಲ ಮಾಡಿದಂತಾಗುತ್ತದೆ ಎಂದು ವಾದಿಸಿದ್ದು, ಬಳಕೆದಾರರು ಒಂದು ಆಪ್ನಿಂದ ಹೊರಗುಳಿಯುವುದು ಉದ್ಯಮ ಕ್ಷೇತ್ರದಲ್ಲಿ ಸಾಮಾನ್ಯವಾದುದು. ನಿಯಮಗಳಿಗೆ ಸಮ್ಮತಿಸದ ಬಳಕೆದಾರರಿಗೆ ಸೇವೆಗಳನ್ನು ಒದಗಿಸದಿರಲು ಕಾನೂನು ಅನುಮತಿಸುತ್ತದೆ. ಬಳಕೆದಾರರು ಆಪ್ ಬಳಸದೆ ಇರುವುದರ ವಿರುದ್ದ ಯಾವುದೇ ಕಾನೂನುಬದ್ಧ ಬಾಧ್ಯತೆ ಇಲ್ಲ ಎಂದು ಹೇಳಿದೆ.
ಇನ್ನು ಆರೋಗ್ಯ ಸೇತು, ಐಆರ್ಸಿಟಿಸಿ, ಭೀಮ್ ಮುಂತಾದ ಸಾರ್ವಜನಿಕ ಸೇವೆ ನೀಡುವ ವೆಬ್ಸೈಟ್ಗಳು ಮತ್ತು ಅಪ್ಲಿಕೇಶನ್ಗಳ ಗೌಪ್ಯತೆ ನೀತಿಗಳು ಕೂಡಾ ವಾಟ್ಸಾಪ್ನಂತೆಯೇ ಇವೆ. ಜೊಮ್ಯಾಟೊ, ಗೂಗಲ್, ಮೈಕ್ರೋಸಾಫ್ಟ್, ಜೂಮ್, ರಿಪಬ್ಲಿಕ್ ವರ್ಲ್ಡ್ ಮೊದಲಾದ ಕಂಪನಿಗಳ ಗೌಪ್ಯತೆ ನೀತಿಗಳಲ್ಲಿ ಬಳಕೆದಾರರ ದತ್ತಾಂಶವನ್ನು ಸಂಗ್ರಹಿಸುವ ಹಕ್ಕನ್ನು ಈಗಲೂ ಉಳಿಸಿಕೊಂಡಿದೆ ಎಂದು ಕೂಡಾ ವಾಟ್ಸಾಪ್ ಹೇಳಿದೆ.
ಈ ಅರ್ಜಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ನೂತನ ನವೀಕರಣ ನೀತಿ 2011ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಉಲ್ಲಂಘನೆ ಮಾಡಿದೆ. ನ್ಯಾಯಾಲಯದಲ್ಲಿ ನೂತನ ಗೌಪ್ಯತಾ ನೀತಿಯ ಸಿಂಧುತ್ವದ ಬಗ್ಗೆ ಅಂತಿಮ ತೀರ್ಪು ಬರುವವರೆಗೂ ವಾಟ್ಸಾಪ್ ನೂತನ ನೀತಿ ಅನುಷ್ಠಾನಕ್ಕೆ ತಡೆ ವಿಧಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಇನ್ನು ಈ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮೇ 17ಕ್ಕೆ ನಿಗದಿ ಮಾಡಿದೆ.