ನವದೆಹಲಿ, ಮೇ.15 (DaijiworldNews/PY): "ಕೊರೊನಾ ವಿರುದ್ದ ಹೋರಾಟಕ್ಕೆ ಉತ್ತೇಜನ ನೀಡಲು ದೆಹಲಿಯ ಪ್ರತಿ ಜಿಲ್ಲೆಯಲ್ಲೂ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ.
"ಇಂದಿನಿಂದ ನಾವು ಬಹಳ ಮುಖ್ಯವಾದ ಸೇವೆಯನ್ನು ಪ್ರಾರಂಭಿಸುತ್ತಿದ್ದೇವೆ. ನಾವು ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಅನ್ನು ಸ್ಥಾಪಿಸುತ್ತಿದ್ದೇವೆ. ಪ್ರತೀ ಜಿಲ್ಲೆಯಲ್ಲೂ 200 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಹೊಂದಿರುವ ಬ್ಯಾಂಕ್ ಇರುತ್ತದೆ. ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭ ಅವರಿಗೆ ವೈದ್ಯಕೀಯ ಆಕ್ಸಿಜನ್ನ ಕೊರತೆಯಿದ್ದು, ಕೆಲವು ಬಾರಿ ಅಕೇಕ ರೋಗಿಗಳು ಸಾವಿಗೀಡಾಗುತ್ತಾರೆ. ಅವರ ಅಗತ್ಯತೆಗಳನ್ನು ಪೂರೈಸಲು ನಾವು ಈ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ಗಳನ್ನು ಸ್ಥಾಪಿಸಿದ್ದೇವೆ" ಎಂದು ತಿಳಿಸಿದ್ದಾರೆ.
"ಯಾವುದೇ ರೋಗಿಯು ಹೋಂ ಕ್ವಾರಂಟೈನ್ನಲ್ಲಿದ್ದು, ಅವರಿಗೆ ವೈದ್ಯಕೀಯ ಆಕ್ಸಿಜನ್ನ ಅವಶ್ಯಕತೆ ಇದ್ದಲ್ಲಿ ನಮ್ಮ ತಂಡ ಅವರ ಮನೆ ಬಾಗಿಲಿಗೆ ಆಕ್ಸಿಜನ್ ಅನ್ನು ತಲುಪಿಸಲಿದೆ" ಎಂದಿದ್ದಾರೆ.
"ಒಂದು ವೇಳೆ ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೂ ಕೂಡಾ, ಆಕ್ಸಿಜನ್ನ ಅವಶ್ಯಕತೆ ಇದ್ದಲ್ಲಿ ಈ ಆಕ್ಸಿಜನ್ ಕಾನ್ಸಂಟ್ರೇಟರ್ ಅನ್ನು ಬಳಸಿಕೊಳ್ಳಬಹುದು" ಎಂದು ತಿಳಿಸಿದ್ದಾರೆ.