ನವದೆಹಲಿ, ಮೇ 15 (DaijiworldNews/MB) : ಇಸ್ರೇಲ್ನಲ್ಲಿ ಪ್ಯಾಲೆಸ್ಟೈನ್ ಮೂಲದ ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್ ದಾಳಿಯಿಂದ ಸಾವನ್ನಪ್ಪಿದ್ದ ಕೇರಳದ ಮಹಿಳೆ ಸೌಮ್ಯ ( 31) ಅವರ ಪಾರ್ಥಿವ ಶರೀರ ಶನಿವಾರ (ಮೇ 15) ಬೆಳಗ್ಗೆ ನವದೆಹಲಿಗೆ ತಲುಪಿದೆ.
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಶನಿವಾರ ಐದನೇ ದಿನಕ್ಕೆ ಮುಂದುವರಿದಿದ್ದು, ರಾಕೆಟ್, ಶೆಲ್ ದಾಳಿ ಇದೀಗ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ.
ಮೇ 13 ರ ಮಂಗಳವಾರ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಇಡ್ಡುಕ್ಕಿ ಮೂಲದ ಮಹಿಳೆ ಸೌಮ್ಯ ಅವರು ಪ್ಯಾಲೆಸ್ತೇನಿಯನ್ ರಾಕೆಟ್ ದಾಳಿಗೆ ಬಲಿಯಾಗಿದ್ದರು. ಇದೀಗ ಸೌಮ್ಯ ಸಂತೋಷ್ ಪಾರ್ಥಿವ ಶರೀರ ಇಸ್ರೇಲ್ನಿಂದ ಭಾರತಕ್ಕೆ ಆಗಮಿಸಿದೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿ ಮುರಳೀಧರನ್ ಮತ್ತು ಇಸ್ರೇಲ್ ಉಪರಾಯಭಾರಿ ರೋನಿ ಯೆಡಿಡಿಯಾ ಕ್ಲೈನ್ ಅವರು ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.
ಇಡುಕ್ಕಿ ಜಿಲ್ಲೆಯ ಕೀರಿಥೋಡು ಮೂಲದ ಸೌಮ್ಯ ಕಳೆದ ಏಳು ವರ್ಷಗಳಿಂದ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್ನ ಮನೆಯೊಂದರಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ಸೌಮ್ಯ ಕೇರಳದಲ್ಲಿರುವ ಪತಿ ಸಂತೋಷ್ ಜೊತೆಗೆ ಸಂಜೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದಾಗ ಸೌಮ್ಯ ನಿವಾಸದ ಮೇಲೆ ರಾಕೆಟ್ ಬಿದ್ದಿದೆ ಎಂದು ಹೇಳಲಾಗಿದೆ. "ವಿಡಿಯೋ ಕರೆಯ ಸಮಯದಲ್ಲಿ ನನ್ನ ಸಹೋದರನಿಗೆ ದೊಡ್ಡ ಶಬ್ದ ಕೇಳಿಸಿತು. ಇದ್ದಕ್ಕಿದ್ದಂತೆ ಫೋನ್ ಸಂಪರ್ಕ ಕಡಿತವಾಯಿತು. ನಂತರ ನಾವು ತಕ್ಷಣ ಅಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದವರನ್ನು ಸಂಪರ್ಕಿಸಿದ್ದೇವೆ. ಆ ಬಳಿಕ ನಮಗೆ ಈ ಘಟನೆಯ ಬಗ್ಗೆ ಮಾಹಿತಿ ಲಭಿಸಿದೆ'' ಎಂದು ಮೃತ ಸೌಮ್ಯರ ಪತಿ ಸಂತೋಷ್ನ ಸಹೋದರ ಸಾಜಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದರು.
ಸೌಮ್ಯ ಸಂತೋಷ್ ಅವರ ಸಾವಿಗೆ ಸಂತಾಪ ಸೂಚಿಸಿದ್ದ ಇಸ್ರೇಲ್ ಸರ್ಕಾರ, ಆಕೆಯ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿತ್ತು.