ತಿರುವನಂತಪುರ, ಮೇ.15 (DaijiworldNews/PY): ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಅಗತ್ಯವಾದ ವಸ್ತುಗಳ ಬೆಲೆ ನಿಗದಿಪಡಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ಸಿಎಂ ಪಿಣರಾಯಿ ವಿಜಯನ್ ಅವರ ಸರ್ಕಾರ ಕೇರಳದ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ 1986 ಅನ್ನು ಜಾರಿಗೆ ತಂದಿದೆ. ಈ ಕ್ರಮದಲ್ಲಿಆರೋಗ್ಯ ಸೇವೆ ಕೈಗೆಟುಕುವಂತಿದೆ ಎನ್ನುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರದ ಸಲಹೆಯನ್ನು ಉಲ್ಲೇಖಿಸಿದೆ.
ರಾಜ್ಯದ ಆಹಾರ ಹಾಗೂ ನಾಗರಿಕ ಇಲಾಖೆಯು ಈ ಆದೇಶವನ್ನು ಹೊರಡಿಸಿದ್ದು, ಅದರ ದರ ಪಟ್ಟಿಯಲ್ಲಿರುವಂತೆ ಪಿಪಿಇ ಕಿಟ್ಗೆ 273 ರೂ.ಗಿಂತ ಹೆಚ್ಚಿನ ಬೆಲೆ ಪಡೆಯುವಂತಿಲ್ಲ. ಒಂದು ಎನ್ 95 ಮಾಸ್ಕ್ಗೆ 22 ರೂ., ಸರ್ಜಿಕಲ್ ಮಾಸ್ಕ್ಗೆ 3 ರೂಪಾಯಿ 90 ಪೈಸೆ, ಆಕ್ಸಿಮೀಟರ್ಗೆ 1,500ರೂ. ಗಿಂತ ಹೆಚ್ಚಿನ ಚಾರ್ಜ್ ಮಾಡುವ ಹಾಗಿಲ್ಲ ಎಂದು ತಿಳಿಸಿದೆ.
ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರೊನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್ಆರ್ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ. ನಿಗದಿ ಪಡಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಯ ದರವನ್ನು ಕಳೆದ ಸೋಮವಾರ ಸರ್ಕಾರ ನಿಗದಿಪಡಿಸಿತ್ತು. ಇಂತಹ ಸೌಲಭ್ಯಗಳಲ್ಲಿ ಕೊರೊನಾ ಆರೈಕೆಯಲ್ಲಿ ರಾಜ್ಯವು ಶೇ.50 ಹಾಸಿಗೆಗಳನ್ನು ನಿಗದಿಪಡಿಸಿತ್ತು.
ರಾಜ್ಯದ ಖಾಸಗಿ ಕೇಂದ್ರಗಳಲ್ಲಿ ಆರ್ಟಿಪಿಸಿಆರ್ ಪರಿಕ್ಷಾ ಶುಲ್ಕವನ್ನು 1,700 ರೂ. ನಿಂದ 500 ರೂ. ಗೆ ಇಳಿಸಲಾಗಿತ್ತು. ಈಗಾಗಲೇ ರಾಜ್ಯ ಸರ್ಕಾರಿ ಆಸ್ಪತ್ರೆಗಳು ಈ ಪರೀಕ್ಷೆಗಳನ್ನು ಉಚಿತವಾಗಿ ನಡೆಸುತ್ತಿವೆ.