ಬೆಂಗಳೂರು, ಮೇ 15 (DaijiworldNews/MB) : ಕೊರೊನಾ ಲಸಿಕೆ ವಿಚಾರದಲ್ಲಿ ರಾಜ್ಯದ ಜನರಿಗೆ ಸಿಹಿಸುದ್ದಿ ದೊರತಿದೆ. ರಾಜ್ಯದಲ್ಲೇ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ರಾಜ್ಯ ಕೋವಿಡ್ ಕಾರ್ಯಪಡೆ ಮುಖ್ಯಸ್ಥರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ''ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಭಾರತ್ ಬಯೋಟೆಕ್ ಕಂಪನಿ ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಘಟಕ ಸ್ಥಾಪಿಸಲಾಗುತ್ತದೆ'' ಎಂದು ತಿಳಿಸಿದ್ದಾರೆ.
''ರೈಲು ಸೇರಿದಂತೆ ಉತ್ತಮ ಸಂಪರ್ಕ ವ್ಯವಸ್ಥೆ ಇರುವ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಘಟಕ ಸ್ಥಾಪಿಸಲಾಗುವುದು. ಅಲ್ಲಿ ಲಸಿಕೆ ತಯಾರಾದರೆ ರಾಜ್ಯಕ್ಕೆ ಒಳ್ಳೆಯದಾಗಲಿದೆ'' ಎಂದು ಹೇಳಿದರು.
ಇನ್ನು ''ಕೋವಿಶೀಲ್ಡ್ ತಯಾರಿಸುವ ಸೀರಂ ಮಾತ್ರವಲ್ಲದೆ, ಬೇರೆ ಯಾವುದೇ ಲಸಿಕೆ ತಯಾರಿಕೆ ಕಂಪನಿ ರಾಜ್ಯದಲ್ಲಿ ಘಟಕ ಸ್ಥಾಪಿಸಲು ಮುಂದಾದರೆ ಅಗತ್ಯವಾದ ಎಲ್ಲ ಸಹಕಾರ ನೀಡಲಾಗುವುದು, ಶೀಘ್ರವೇ ಅನುಮತಿ ನೀಡಲಾಗುವುದು'' ಎಂದು ಭರವಸೆಯನ್ನೂ ಅವರು ನೀಡಿದ್ದಾರೆ.
ಇನ್ನು ''ಸರ್ಕಾರವು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯುತ್ತಮ ವೈದ್ಯಕೀಯ ಮೂಲಸೌಕರ್ಯ ಸ್ಥಾಪಿಸಲಿದೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ ಹಾಗೂ ಆಕ್ಸಿಜನ್, ಐಸಿಯು ಬೆಡ್ಗಳ ವ್ಯವಸ್ಥೆಗೂ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದ್ದಾರೆ.
''ಆಗಸ್ಟ್ ತಿಂಗಳಲ್ಲಿ 40 ಕೋಟಿ ಡೋಸ್ ಲಸಿಕೆ ದೇಶದಲ್ಲಿ ಉತ್ಪಾದನೆ ಆಗಲಿದೆ ಎಂದು ಈಗಾಗಲೇ ನೀತಿ ಆಯೋಗ ತಿಳಿಸಿದೆ. ಜೂನ್-ಜುಲೈ ತಿಂಗಳಲ್ಲಿ ಅಧಿಕ ಪ್ರಮಾಣದಲ್ಲಿ ಲಸಿಕೆ ತಯಾರಾಗಲಿದೆ'' ಎಂದು ತಿಳಿಸಿದ ಅವರು, ''ದೇಶದಲ್ಲಿ ಈವರೆಗೆ 19 ಕೋಟಿ ಡೋಸ್ ಲಸಿಕೆ ನೀಡಲಾಗಿದೆ'' ಎಂದು ಮಾಹಿತಿ ನೀಡಿದರು.
ಇನ್ನು ''ಕೇಂದ್ರ ಸರ್ಕಾರ ಲಸಿಕೆ ತಯಾರಿಕೆ ಕಂಪನಿಗಳಿಗೆ ಸಾಕಷ್ಟುಉತ್ತೇಜನ ನೀಡುತ್ತಿದೆ'' ಎಂದು ಹೇಳಿದ ಅವರು, ''ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಮೇಲಿರುವ ಪೇಟೆಂಗ್ ವಿನಾಯಿತಿ ಬಗ್ಗೆ ವಿವಿಧ ದೇಶಗಳ ನಾಯಕರೊಂದಿಗೆ ಈಗಾಗಲೇ ಯಶಸ್ವಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆ ಇನ್ನಷ್ಟು ಲಸಿಕೆ ತಯಾರಿಕೆ ಘಟಕಗಳು ರಾಜ್ಯಕ್ಕೆ ಬರಲಿವೆ'' ಎಂದರು.
ಇನ್ನು ಕೊರೊನಾ ರೋಗಿಗಳಿಗೆ ವೈದ್ಯಕೀಯ ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ 2–ಡಯಾಕ್ಸಿ–ಡಿ–ಗ್ಲೂಕೋಸ್ (2–ಡಿಜಿ) ಔಷಧ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಡಿಆರ್ಡಿಒ ಅಧಿಕಾರಿಗಳು ಮಾಹಿತಿ ನೀಡಿದ್ದು, ''ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಕೊರೊನಾ ಸೋಂಕಿನ ವಿರುದ್ಧ ಅಭಿವೃದ್ಧಿಪಡಿಸಿರುವ 2–ಡಿಜಿ ಔಷಧದ 10 ಸಾವಿರ ಡೋಸ್ಗಳ ಬಳಕೆಗೆ ಮುಂದಿನ ವಾರ ಚಾಲನೆ ನೀಡಲಾಗುವುದು'' ಎಂದು ಹೇಳಿದ್ದಾರೆ.
ಈಗಾಗಲೇ ಈ ಔಷಧದ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದಾರೆ.