ತಿರುವನಂತಪುರ, ಮೇ.14 (DaijiworldNews/PY): ಸುಳ್ಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕ್ರೈಂ ಬ್ರಾಂಚ್ ಬಂಧಿಸಿದೆ.
ಪ್ರಸ್ತುತ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸ್ವಪ್ನಾ ಅವರನ್ನು ಏರ್ ಇಂಡಿಯಾ ಅಧಿಕಾರಿ ಎಲ್ ಎಸ್ ಸಿಬು ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ಸ್ವಪ್ನಾ ಅವರನ್ನು ಆನ್ಲೈನ್ನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಪ್ನ ಅವರನ್ನು ಮೇ 22 ರವರೆಗೆ ವಶಕ್ಕೆ ಪಡೆಯುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕ್ರೈಂ ಬ್ರಾಂಚ್ ಗೆ ಆದೇಶಿಸಿದೆ.
2014 ರಲ್ಲಿ ತಿರುವನಂತಪುರದ ಗ್ರೌಂಡ್ ಸರ್ವೀಸಸ್ ವಿಭಾಗದಲ್ಲಿ ಆಫೀಸರ್ ಏಪ್ರನ್ ಆಗಿ ಕೆಲಸ ಮಾಡುತ್ತಿದ್ದ ಏರ್ ಇಂಡಿಯಾದ ಯೂನಿಯನ್ ನಾಯಕ ಸಿಬು ಅವರು ಸಿಬಿಐ, ಕೇಂದ್ರ ವಿಜಿಲೆನ್ಸ್ ಆಯೋಗ ಮತ್ತು ಪ್ರಧಾನ ಮಂತ್ರಿಯ ಗಮನಕ್ಕೆ ಹಣಕಾಸಿನ ಅಕ್ರಮಗಳ ಬಗ್ಗೆ ಗಮನಕ್ಕೆ ತಂದಿದ್ದರು.
ಸಿಬು ವಿರುದ್ದದ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಪ್ರತ್ಯೇಕ ಆದೇಶದಲ್ಲಿ ಕ್ರೈಂ ಬ್ರಾಂಚ್ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಸ್ವಪ್ನಾ ಸುರೇಶ್ ಅವರು ಏರ್ ಇಂಡಿಯಾ ಎಸ್ಎಟಿಎಸ್ನಲ್ಲಿ ಉದ್ಯೋಗದಲ್ಲಿದ್ದರು. ಸಿಬು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತಮ್ಮ ತನಿಖೆಯನ್ನು ಆರಂಭಿಸಿದ ಸಂದರ್ಭ 2015ರಲ್ಲಿ ಸ್ವಪ್ನಾ ಕೆಲಸ ತೊರೆದಿದ್ದರು.
ಬಳಿಕ ವಿವಾದಾತ್ಮಕ ಚಿನ್ನ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರನ್ನು ಎನ್ಐಎ ಬಂಧಿಸಿದ್ದು, ಸಿಬು ಅವರಿಗೆ ಪರಿಹಾರ ಸಿಕ್ಕಿದಂತಾಗಿತ್ತು.
ಸಿಬು ಅವರ ಪತ್ನಿ ಹಾಗೂ ಮಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮನವಿ ಮಾಡಿದ್ದರೂ ಕೂಡಾ ಅಧಿಕಾರಿಗಳು ಮೌನವಹಿಸಿದ್ದರು. ಅಲ್ಲದೇ ಕಳೆದ ವರ್ಷ ಆಗಸ್ಟ್ನಲ್ಲಿ ಸಿಬು ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿತ್ತು. ನಂತರ ಸಿಬು ಅವರನ್ನು ಕಳೆದ ವರ್ಷ ಡಿಸೆಂಬರ್ ತಿಂಗಳಿನ ಅಂತ್ಯದಲ್ಲಿ ಪುನಃ ಕೆಲಸಕ್ಕೆ ನೇಮಕ ಮಾಡಲಾಗಿದೆ.