ಬೆಂಗಳೂರು, ಮೇ.14 (DaijiworldNews/PY): "ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ" ಎಂದು ಬಿಜೆಪಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ತಿರುಗೇಟು ನೀಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, "ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ" ಎಂದಿದೆ.
"ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ಉಚಿತ ಲಸಿಕೆ ನೀಡಲು ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ?" ಎಂದು ಪ್ರಶ್ನಿಸಿದೆ.
"ಸಂಕಷ್ಟದ ಸಮಯದಲ್ಲಿಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಒಂದಿಷ್ಟು ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು ಬಿಟ್ಟು ಸುಮ್ಮನಿರುವಿರಾ?" ಎಂದು ಕೇಳಿದೆ.
"ಸರ್ಕಾರಕ್ಕೆ ಸವಾಲೆಸೆಯುವ ಡಿಕೆ ಶಿವಕುಮಾರ್ ಅವರೇ, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯಕ್ಕೆ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ?" ಎಂದು ಪ್ರಶ್ನಿಸಿದೆ.