ಬೆಂಗಳೂರು, ಮೇ.14 (DaijiworldNews/HR): ಆಸ್ಪತ್ರೆಗಳ ವಾಸ್ತವ ಸ್ಥಿತಿಗತಿಗಳನ್ನು ತಿಳಿಯಲು ಕಾಲ್ ಸೆಂಟರ್ಗಳ ಮೂಲಕ ಆಸ್ಪತ್ರೆಗಳ ರಿಯಾಲಿಟಿ ಚೆಕ್ ಮಾಡಲಾಗುತ್ತದೆ" ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ ರೂಂ, ಕಾಲ್ ಸೆಂಟರ್ ನಿರ್ವಹಣೆ ಮತ್ತು ಸೋಂಕಿತರಿಗೆ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯ ನೋಡಲ್ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಆಸ್ಪತ್ರೆಗಳ ರಿಯಾಲಿಟಿ ಚೆಕ್ ಮಾಡುವುದರಿಂದ ಆಸ್ಪತ್ರೆಗಳಲ್ಲಿ ಬಿಡುಗಡೆಯಾಗುತ್ತಿರುವ ರೋಗಿಗಳು ಮತ್ತು ದಾಖಲಾಗುತ್ತಿರುವ ರೋಗಿಗಳ ನಿಖರ ಮಾಹಿತಿ, ಬೆಡ್ ಗಳ ಲಭ್ಯತೆ ಬಗ್ಗೆ ವಾಸ್ತವ ವರದಿಗಳು ದೊರಕಲು ಸಾಧ್ಯವಾಗುತ್ತದೆ" ಎಂದರು.
ಇನ್ನು ಈ ಹಿಂದೆ 1912 ಸಹಾಯವಾಣಿಯಲ್ಲಿ 60 ಮಾರ್ಗಗಳಿದ್ದು,, ಈಗ ಅದಕ್ಕೆ ಹೆಚ್ಚುವರಿಯಾಗಿ 70 ಮಾರ್ಗಗಳನ್ನು ಸೇರಿಸಲಾಗಿದೆ. ಈವರೆಗೂ ಈ ಸಹಾಯವಾಣಿಗೆ ಕರೆ ಮಾಡಿದಾಗ 12 ರಿಂದ 20 ನಿಮಿಷಗಳ ಕಾಯುವಿಕೆ ಇರುತ್ತಿತ್ತು, ಆದರೆ ಈ ಹೆಚ್ಚುವರಿ ಕರೆ ಮಾರ್ಗಗಳನ್ನು ಸ್ಥಾಪಿಸಿರುವುದರಿಂದ ಈಗ ಕರೆ ಮಾಡಿದ ಕೂಡಲೇ ಸೇವೆ ಲಭ್ಯವಾಗಲಿದೆ ಎಂದಿದ್ದಾರೆ.
ಈ ಕಾಲ್ ಸೆಂಟರ್ನಲ್ಲಿ ವೈದ್ಯರು ಸಹ ಉಪಸ್ಥಿತರಿದ್ದು, ವಲಯಗಳಿಗೆ ಕರೆ ವರ್ಗಾವಣೆ ವಿಳಂಬವಾದಲ್ಲಿ ಅವರೇ ಸ್ವತಹ ಮಾತನಾಡಿ ಅಗತ್ಯ ವೈದ್ಯಕೀಯ ಸಲಹೆ ಸೂಚನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.