ಬೆಂಗಳೂರು, ಮೇ.14 (DaijiworldNews/PY): "ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ, ನಮಗೆ ಸದಾ ಗೌರವವಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ದುರಹಂಕಾರಿ ಯಾರು ಸಿದ್ದರಾಮಯ್ಯನವರೇ? ಅವರವರ ಹಾವಭಾವಗಳು ದುರಹಂಕಾರಿ ಯಾರೆಂದು ಹೇಳುತ್ತವೆ, ಅಧಿಕಾರದ ಮದದಿಂದ ಮೆರೆದವರು ಯಾರೆಂದು ರಾಜ್ಯಕ್ಕೆ ಗೊತ್ತಿದೆ. ಮಾನವೀಯ ಕಳಕಳಿ ಇದ್ದವರು ವೋಟಿಗಾಗಿ ಕೊಲೆಗಡುಕರನ್ನು ಬೆಂಬಲಿಸುವ ಹೀನ ರಾಜಕಾರಣ ಮಾಡುವುದಿಲ್ಲ. ತನ್ನದೇ ಶಾಸಕರ ಮನೆ ಸುಟ್ಟವರು ಅಮಾಯಕರೆಂದು ಬಿಂಬಿಸುವವರು ಮಾನವೀಯ ಕಳಕಳಿ ಇರುವವರೇ?" ಎಂದು ಪ್ರಶ್ನಿಸಿದ್ದಾರೆ.
"ಯಾವ ಪಕ್ಷ ನ್ಯಾಯಾಲಯಗಳು ಮೋದಿ ಆಲಯಗಳಾಗಿವೆ ಎಂದು ಆರೋಪಿಸಿ ಸಿಎಎ, ರಾಮ ಮಂದಿರ ತೀರ್ಪಿನ ವಿರುದ್ಧ ಅಪಪ್ರಚಾರ ಮಾಡಿತ್ತೋ, ಅದು ಈಗ ನ್ಯಾಯಾಲಯಗಳ ಪರವಾಗಿ ಗೌರವ ವ್ಯಕ್ತಪಡಿಸುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ. ಏನಂತೀರಾ ಮಾನ್ಯ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರೇ?" ಎಂದು ಕೇಳಿದ್ದಾರೆ.
"ಅಷ್ಟಕ್ಕೂ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾದರೂ ಏನು? ನ್ಯಾಯಾಧೀಶರೇನು ಸರ್ವಜ್ಞರಲ್ಲ ಅವರೂ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ನಿರ್ದೇಶನ ನೀಡುತ್ತಾರೆ ಎಂದಿದ್ದೇನೆ, ಸರ್ವೋಚ್ಚ ನ್ಯಾಯಾಲಯವೂ ಇದನ್ನೇ ಹೇಳಿದೆ. ಇದರಲ್ಲಿ ತಪ್ಪೇನಿದೆ ? ಮೊಸರಲ್ಲಿ ಕಲ್ಲು ಹುಡುಕುವ ಮನೋಭಾವದವರು ಎಲ್ಲದರಲ್ಲೂ ತಪ್ಪು ಹುಡುಕುತ್ತಾರೆ. ಯದ್ಭಾವಂ ತದ್ಭವತಿ" ಎಂದಿದ್ದಾರೆ.
"ಬಿಜೆಪಿಗೆ ನ್ಯಾಯಾಂಗದ ಗೌರವದ ಬಗ್ಗೆ ಯಾರೂ ಪಾಠ ಹೇಳಿಕೊಡಬೇಕಾಗಿಲ್ಲ, ನಮಗೆ ಸದಾ ಗೌರವವಿದೆ. ಯಾವ ಪಕ್ಷ ನ್ಯಾಯಾಲಯದ ತೀರ್ಪಿನ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸ್ವಾತಂತ್ರ್ಯಹರಣ ಮಾಡಿತ್ತೋ, ಅದೇ ಪಕ್ಷ ಇಂದು ಏಕದಂ ನ್ಯಾಯಾಲಯದ ಬಗ್ಗೆ ಗೌರವ ವ್ಯಕ್ತಪಡಿಸುತ್ತಿದೆ. ಅಲ್ಲವೇ ಕಾಂಗ್ರೆಸ್?" ಎಂದು ಪ್ರಶ್ನಿಸಿದ್ದಾರೆ.
"ಸಿ. ಟಿ ರವಿ ಅವರೇ ಜನರ ಸಂಕಟಕ್ಕೆ ದನಿಯಾಗಲು ಸರ್ವಜ್ಞನಾಗಬೇಕಿಲ್ಲ, ಮಾನವೀಯತೆಯುಳ್ಳ ಮನುಷ್ಯನಾಗಿದ್ದರೆ ಸಾಕು. ಅಧಿಕಾರದ ದುರಹಂಕಾರ ಬಿಟ್ಟು ಮೊದಲು ಮನುಷ್ಯರಾಗಿ. ನ್ಯಾಯಾಧೀಶರ ನಿಂದನೆ ನ್ಯಾಯಾಲಯದ ನಿಂದನೆ ಕೂಡಾ ಆಗುತ್ತದೆ ಎಂದು ಗೊತ್ತಿಲ್ಲದ ನಿಮ್ಮಂತಹವರನ್ನು ಸರ್ವಜ್ಞ ಎನ್ನುವುದಿಲ್ಲ, ಮೂರ್ಖ ಎನ್ನುತ್ತಾರೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.