ನವದೆಹಲಿ, ಮೇ.14 (DaijiworldNews/HR): "ಭಾರತದಲ್ಲಿ ಕೊರೊನಾದ ಎರಡನೇ ಅಲೆ ತೀವ್ರಗತಿಯಲ್ಲಿ ಏರಿಕೆಯಾಗಿರುವುದಕ್ಕೆ ಸರ್ಕಾರವೇ ಕಾರಣ, ಬರೀ ಇಮೇಜ್ ಸೃಷ್ಟಿಸಿಕೊಳ್ಳುವುದಕ್ಕಿಂತ ಜನರ ಪ್ರಾಣ ಕೂಡ ಮುಖ್ಯ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು" ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, "ಕೊರೊನಾದ ಎರಡನೇ ಅಲೆಯ ತೀವ್ರತೆಯನ್ನು ನಿಭಾಯಿಸುವಲ್ಲಿ ಸರ್ಕಾರ ಎಡವಿದ್ದು, ಈ ಪರಿಸ್ಥಿತಿಯನ್ನು ಇನ್ನೊಂದು ಪಕ್ಷದವರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಕೂಡ ಸರಿಯಲ್ಲ. ಸದ್ಯ ಆಗುತ್ತಿರುವುದಕ್ಕೆಲ್ಲ ಸರ್ಕಾರವೇ ಕಾರಣ" ಎಂದರು.
ಸರ್ಕಾರದ ವಿರುದ್ಧ ಅನೇಕರು ಟೀಕೆಗಳನ್ನು ಮಾಡುತ್ತಿದ್ದು, ಅವೆಲ್ಲವು ಸರಿಯಾದ ಹಾದಿಯಲ್ಲಿವೆ. ಈಗಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನಾಗರಿಕರು ಸರ್ಕಾರವನ್ನು ಯಾಕಾಗಿ ಆಯ್ಕೆ ಮಾಡಿದ್ದಾರೆಯೋ ಆ ಕಾರ್ಯವನ್ನು ಅವರು ಈಗ ಮಾಡಲೇ ಬೇಕು" ಎಂದಿದ್ದಾರೆ.
ಬೆಡ್, ಆಕ್ಸಿಜನ್ ಸಿಗದೆ ಒದ್ದಾಡುತ್ತಿರುವವರನ್ನು ನೋಡಿದಾಗ, ಗಂಗೆಯಲ್ಲಿ ತೇಲುತ್ತಿರುವ ಹೆಣಗಳನ್ನು ನೋಡಿದಾಗ ಸಾಮಾನ್ಯ ಪ್ರಜೆಗಳಾದ ನಮಗೆ ಆಕ್ರೋಶ ಉಕ್ಕಿ ಬರುತ್ತದೆ ಎಂದು ಹೇಳಿದ್ದಾರೆ.
ಇನ್ನು ಮೋದಿಯ ಬಹುದೊಡ್ಡ ಬೆಂಬಲಿಗರಾಗಿರುವ ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಬಿಜೆಪಿ ಸಂಸದೆಯಾಗಿದ್ದಾರೆ.