ಚಂಡೀಗಡ, ಮೇ.14 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಸ್ಥಳದಿಂದ ಹಳ್ಳಿಗಳಿಗೂ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ಹೋರಾಟವನ್ನು ಸ್ಥಗಿತಗೊಳಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕು ಹರಡುವುದನ್ನು ಗಮನದಲ್ಲಿಟ್ಟುಕೊಂಡು ನಾನು ಮತ್ತೊಮ್ಮೆ ರೈತ ಮುಖಂಡರಿಗೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡುತ್ತೇನೆ. ಈ ಬಿಕ್ಕಟ್ಟಿನ ಸಮಯದಲ್ಲಿ ಜನರ ಪ್ರಾಣ ಉಳಿಸುವುದು ನಮ್ಮೆಲ್ಲರ ಏಕೈಕ ಗುರಿಯಾಗಿದ್ದು, ಮಾನವ ಜೀವಗಿಂತಲೂ ಮಿಗಿಲಾಗಿ ಬೇರೇನೂ ಇಲ್ಲ" ಎಂದರು.
ಇನ್ನು ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಅನೇಕ ಹಳ್ಳಿಗಳಲ್ಲಿ ಹಾಟ್ಸ್ಪಾಟ್ ಪ್ರದೇಶಗಳು ನಿರ್ಮಾಣವಾಗಿದೆ. ಯಾಕೆಂದರೆ ಜನರು ನಿಯಮಿತವಾಗಿ ಪ್ರತಿಭಟನೆ ಸ್ಥಳದಿಂದ ಹಳ್ಳಿಗಳಿಗೆ ತೆರಳುತ್ತಿದ್ದಾರೆ" ಎಂದಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಪ್ರತಿಭಟನೆಯನ್ನು ಸ್ಥಗಿತಗೊಳಿಸುವಂತೆ ನಾನು ರೈತ ಮುಖಂಡರಿಗೆ ಮನವಿ ಮಾಡಿದ್ದೇನೆ. ಬೇಕಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಮೇಲೆ ಪುನರಾರಂಭಿಸಬಹುದು. ಪ್ರತಿಭಟನಾ ಸ್ಥಳಗಳಿಂದ ಗ್ರಾಮಸ್ಥರು ತಮ್ಮ ಹಳ್ಳಿಗಳಿಗೆ ಹೋಗಿ ಬರುವುದರಿಂದ ಹಲವು ಕಡೆಗಳಲ್ಲಿ ಹಾಟ್ ಸ್ಪಾಟ್ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಜಾರಿಗೊಳಿಸಿರುವ ಮೂರು ನೂತಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ರೈತರು 2020 ನವೆಂಬರ್ 26ರಿಂದಲೇ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.