ಮೈಸೂರು, ಮೇ 14(DaijiworldNews/MS):ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಕ್ಲೀನ್ ಚಿಟ್ ಸಿಕ್ಕಿದ ಬೆನ್ನಲ್ಲೇ, ಮೈಸೂರು ಡಿಸಿ ಪತ್ರಿಕಾಗೋಷ್ಟಿ ನಡೆಸಿ " ಆರೋಪ ಮಾಡಿದವರೆಲ್ಲಾ ಮೈಸೂರು ಜನತೆಯ ಕ್ಷಮೆ ಯಾಚಿಸಲಿ' ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ರೋಹಿಣಿ ಸಿಂಧೂರಿ " ನಾನು ಕರ್ತವ್ಯದ ಮೇಲೆ ಮೈಸೂರಿನಲ್ಲಿ ಅಧಿಕಾರ ವಹಿಸಿಕೊಂಡು ಬಂದ ದಿನದಿಂದ ಕೆಲವರು ಒಂದಿಲ್ಲೊಂದು ಆಪಾದನೆ ಮಾಡುತ್ತಲೇ ಬಂದಿದ್ದಾರೆ. ಕಳೆದ 7 ತಿಂಗಳಿಂದಲೂ ಇಂತಹ ಆರೋಪಗಳು ನನ್ನ ವಿರುದ್ದ ಮಾಡುತ್ತಲೇ ಬಂದಿದ್ದಾರೆ. ಆದರೆ, ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ, ಅದು ನನ್ನ ಕೆಲಸವೂ ಅಲ್ಲ. ಆದರೆ ಚಾಮರಾಜನಗರ ಸಾವಿನ ವಿಚಾರದಲ್ಲಿ ಕೇಳಿ ಬಂದ ಆಪಾದನೆ ಅಪಾರ ನೋವುಂಟು ಮಾಡಿತ್ತು. ಆದರೆ ನಿವೃತ್ತ ನ್ಯಾಯಮೂರ್ತಿಗಳ ಆಯೋಗ ಹೈಕೋರ್ಟ್ಗೆ ವರದಿಯಿಂದ ಕಳಂಕದಿಂದ ಮುಕ್ತರಾಗಿದ್ದೇವೆ" ಎಂದು ರೋಹಿಣಿ ಸಿಂಧೂರಿ ಹೇಳಿದರು.
"ಹಲವು ತಿಂಗಳಿಂದ ನನ್ನ ವಿರುದ್ದ ವೈಯುಕ್ತಿಕವಾಗಿಯೂ ಅನೇಕ ಆರೋಪಗಳನ್ನ ಮಾಡಿದ್ದಾರೆ. ಆದರೆ ಈ ಬಾರಿ ಆರೋಪ ಮಾಡಲು ಹೋಗಿ ಮೈಸೂರಿಗೆ ಕಳಂಕ ತರಲು ಪ್ರಯತ್ನಿಸಿದ್ದರು. ಈಗ ನಾವು ಮುಕ್ತರಾಗಿದ್ದೇವೆ. ಆದರೆ ಕಳಂಕ ತರಲು ಪ್ರಯತ್ನಿಸಿದವರು ಮೈಸೂರು ಜನರ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದರು.