ಬೆಂಗಳೂರು, ಮೇ 14(DaijiworldNews/MS): ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ಜಂಟಿ ಪತ್ರಿಕಾಗೋಷ್ಟಿ ನಡೆಸಿ ರಾಜ್ಯ ಸರ್ಕಾರದ ವಿರುದ್ದ ಅಪಾದನೆಗಳ ಸುರಿಮಳೆಗೈದಿದ್ದಾರೆ. ಮಾತ್ರವಲ್ಲದೆ ಜನರ ಜೀವ ಉಳಿಸೋದು ಕಾಂಗ್ರೆಸ್ನ ಕರ್ತವ್ಯವಾಗಿದೆ ಎಂದ ಅವರು ಕೊರೊನಾ ಲಸಿಕೆ ಖರೀದಿಗೆ 100 ಕೋಟಿ ರೂಪಾಯಿಯನ್ನ ನೀಡಲಿದ್ದೇವೆ ಎಂದು ಘೋಷಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಲಸಿಕೆ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ತಯಾರಿ ಮಾಡಿಕೊಳ್ಳದೇ ಇರೋದೇ ಈ ಎಲ್ಲಾ ಸಮಸ್ಯೆಗೆ ಕಾರಣ ಎಂದು ಹೇಳಿದರು. ನಿರ್ವಹಣೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಕೇವಲ ಕಾಂಗ್ರೆಸ್ಸಿನ ಹೇಳಿಕೆಯಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಒಂದೇ ಅಭಿಪ್ರಾಯ ವ್ಯಕ್ತಪಡಿಸಿವೆ.ಕೇಂದ್ರ ಸರ್ಕಾರಕ್ಕೆ 2ನೆ ಅಲೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಸೂಕ್ತ ತಯಾರಿ ಕೈಗೊಳ್ಳೋದನ್ನ ಬಿಟ್ಟು ಜವಾಬ್ದಾರಿಯಿಂದ ಜಾರಿಕೊಂಡಿದೆ. ರಾಜ್ಯದ ಸಿಎಂ ಯಡಿಯೂರಪ್ಪ ನಿದ್ರಾವಸ್ಥೆಯಲ್ಲಿದ್ದಾರೆ. ಲಸಿಕೆಯ ಮೊದಲ ಡೋಸ್ ಹಾಗೂ 2ನೇ ಡೋಸ್ ಬಗ್ಗೆ ಕೇಂದ್ರ ಸರ್ಕಾರ ಇಂದಿಗೂ ಸ್ಪಷ್ಟ ಮಾಹಿತಿ ನೀಡಿಲ್ಲ. ಲಸಿಕೆ ನೀಡಲು 18 ರಿಂದ 45 ವರ್ಷದ ಜನರಿಗೆ ಎರಡು ಡೋಸ್ ನಂತೆ 7 ಕೋಟಿ ಡೋಸ್ ಬೇಕಾಗಿದ್ದು 2100 ಕೋಟಿ ರೂಪಾಯಿ ಹಣ ಬೇಕು. ರಾಜ್ಯ ಸರ್ಕಾರಕ್ಕೆ ಇದೆಲ್ಲ ಗೊತ್ತಿದ್ದರೂ ಕೈಕಟ್ಟಿ ಕುಳಿತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಲಸಿಕೆ ಖರೀದಿಸಲು ಕಾಂಗ್ರೆಸ್ ಶಾಸಕರು ಹಾಗೂ ಸಂಸದರು ತಮ್ಮ ಕ್ಷೇತ್ರದ ಅಭಿವೃದ್ಧಿ ನಿಧಿಯಿಂದ ತಲಾ 1 ಕೋಟಿ ರೂ.ನಂತೆ 100 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ ಕ್ಷೇತ್ರದ ಅಭಿವೃದ್ಧಿ ನಿಧಿಗೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ 2 ಕೋಟಿ ರೂ., ಸಂಸದರು ಹಾಗೂ ರಾಜ್ಯಸಭಾ ಸದಸ್ಯರಿಗೆ ತಲಾ 5 ಕೋಟಿ ರೂ. ನೀಡಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ.ವನ್ನು ಕಾಂಗ್ರೆಸ್ ಶಾಸಕರು, ಸಂಸದರು ದೇಣಿಗೆಯಾಗಿ ರಾಜ್ಯ ಸರಕಾರಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.
ರಾಜ್ಯದ ಪ್ರತಿಯೊಬ್ಬರಿಗೆ ಕೊರೊನಾ ಲಸಿಕೆ ದೊರೆಯುವಂತಾಗಬೇಕು ಎಂಬುದು ನಮ್ಮ ಬಯಕೆ. ಆದ್ದರಿಂದ ಕಾಂಗ್ರೆಸ್ ನಲ್ಲಿ 99 ಶಾಸಕರು ಇದ್ದಾರೆ. ಸಂಸದರು ಹಾಗೂ ರಾಜ್ಯಸಭಾ ಸದಸ್ಯರ ಮೊತ್ತವನ್ನೂ ಸೇರಿಸಿ 100 ಕೋಟಿ ರೂ. ನೀಡಲಾಗುವುದು ಎಂದು ಅವರು ಹೇಳಿದರು.100 ಕೋಟಿ ರೂ. ಮೊತ್ತವನ್ನು ಹೇಗೆ ಯಾರಿಗೆ ನೀಡಬೇಕು. ಲಸಿಕೆ ಖರೀದಿಗೆ ಹೇಗೆ ಬಳಸಬೇಕು ಎಂಬುದನ್ನು ನಾವು ಚಿಂತನೆ ನಡೆಸಿ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.